ರಾಜೀವ್ ಗಾಂಧಿ ಆರೋಗ್ಯ ವಿವಿ ಪ್ರಾದೇಶಿಕ ಕಚೇರಿ 2026ರ ಸೆಪ್ಟಂಬರ್‌ಗೆ ಪೂರ್ಣ: ಡಾ. ಶರಣಪ್ರಕಾಶ್ ಪಾಟೀಲ್
ಮಂಗಳೂರು, ಜೂ.17: ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ 2026ರ ಸೆಪ್ಟಂಬರ್‌ಗೆ ಪೂರ್ಣಗೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ನಗರದ ಮೇರಿಹಿಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಪ್ರಾದೇಶಿಕ ಕಚೇರಿ ಕಟ್ಟಡ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿದ ಅವರು, ಈ ಪ್ರಾದೇಶಿಕ ಕಚೇರಿ ಕಟ್ಟಡದಲ್ಲಿ ಸ್ಕಿಲ್ ಲ್ಯಾಬ್ ಹಾಗೂ ಸ್ಪೋರ್ಟ್ ಹಬ್ ಕೂಡಾ ಸುಮಾರು 49 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದು ಹೇಳಿದರು.
ಮಂಗಳೂರು ಸೇರಿದಂತೆ ರಾಜ್ಯದ ಕಲಬುರಗಿ, ಮೈಸೂರು, ಹುಬ್ಬಳ್ಳಿ, ಬೆಂಗಳೂರು, ದಾವಣಗೆರೆ ಸೇರಿ ಆರು ಕಡೆಗಳಲ್ಲಿ ಸ್ಟೇಟ್ ಆಫ್ ಆರ್ಟ್ ಸ್ಕಿಲ್ ಲ್ಯಾಬ್‌ಗಳನ್ನು ನಿರ್ಮಾಣ ಮಾಡಲು ಬಜೆಟ್ ಘೋಷಣೆ ಯಾಗಿದೆ. ದಾವಣಗೆರೆ ಹಾಗೂ ಕಲಬುರಗಿಯ ಕಟ್ಟಡ ಕಾಮಗಾರಿ ಸಂಪೂರ್ಣವಾಗಿದೆ ಎಂದವರು ಹೇಳಿದರು.
ವಿಧಾನ ಪರಿಷತ್ ಶಾಸಕ ಡಾ. ಮಂಜುನಾಥ ಭಂಡಾರಿ, ರಾಜ್ಯ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್‌ನ ಅಧ್ಯಕ್ಷ ಡಾ. ಇಪ್ತಿಕಾರ್ ಅಲಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಡಾ. ಶಿವಶರಣ್ ಶೆಟ್ಟಿ, ಕಣಚೂರು ವಿದ್ಯಾಸಂಸ್ಥೆಯ ಅಧ್ಯಕ್ಷ ಕಣಚೂರು ಮೋನು, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ ಉಪಸ್ಥಿತರಿದ್ದರು.
1,20,000 ಚ.ಅ. ವಿಸ್ತೀರ್ಣದ ಕಟ್ಟಡ
ಮೇರಿಹಿಲ್‌ನಲ್ಲಿ ನಿರ್ಮಾಣವಾಗುತ್ತಿರುವ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕಚೇರಿ ಕಟ್ಟಡ 1,20,000 ಚ. ಅಡಿ ವಿಸ್ತೀರ್ಣವನ್ನು ಹೊಂದಿದ್ದು, ತಳ ಅಂತಸ್ತು ನೆಲ ಮಹಡಿ ಸೇರಿ ಆರು ಅಂತಸ್ತುಗಳನ್ನು ಹೊಂದಲಿದೆ. ಕೆಳ ತಳ ಅಂತಸ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಲಿದ್ದು,ತಳ ಅಂತಸ್ತಿ ನಲ್ಲಿ ವಿಶ್ವವಿದ್ಯಾನಿಲಯದ ಕುಲಪತಿ, ರಿಜಿಸ್ಟ್ರಾರ್, ಹಣಕಾಸು ಸೇರಿದಂತೆ ಇತರ ಕಚೇರಿಗಳು ಇರಲಿವೆ. ಮೊದಲ ಹಾಗೂ ಎರಡನೆ ಮಹಡಿಯಲ್ಲಿ ಸಿಮ್ಯುಲೇಶನ್‌ನೊಂದಿಗೆ ಸ್ಕಿಲ್ ಲ್ಯಾಬ್‌ಗಳು ಇರಲಿವೆ. 4ನೆ ಮಹಡಿಯಲ್ಲಿ ಸ್ಪೋರ್ಟ್‌ಗೆ ಮೀಸಲಿಡಲಾಗುತ್ತದೆ. ಮೂರು ತಿಂಗಳ ಹಿಂದೆ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಬೆಂಗಳೂರು ಮತ್ತು ರಾಮನಗರದಲ್ಲಿ ಇನ್ನಷ್ಟೆ ಕಾಮಗಾರಿ ಆರಂಭವಾಗಬೇಕಾಗಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕಚೇರಿ ಕಟ್ಟಡದ ಕಾರ್ಯಪಾಲಕ ಇಂಜಿನಿಯರ್ ಧನಂಜಯ್ ಕೆ.ಕೆ. ತಿಳಿಸಿದರು.