×
Ad

ಡಿ. 28: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ‘ನಾಡ ಕಚೇರಿ ಚಲೋ’ ಹೋರಾಟ

Update: 2023-12-07 17:16 IST

ಮಂಗಳೂರು: ಸುರತ್ಕಲ್ ಸಮೀಪದ ಕಾನ-ಕಟ್ಲ ಜನತಾ ಕಾಲನಿಯ ಸರಕಾರಿ ಶಾಲೆಯ ಭೂ ವಿವಾದಕ್ಕೆ ಸಂಬಂಧಿಸಿ ದಂತೆ ಹಾಲಿ ಮತ್ತು ಮಾಜಿ ಅಧಿಕಾರಿ-ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಡಿ.28ರಂದು ‘ಸುರತ್ಕಲ್ ನಾಡ ಕಚೇರಿ ಚಲೋ ಹೋರಾಟ’ ಮಾಡಲಾಗುವುದು ಎಂದು ಶಾಲೆ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಬಿ.ಕೆ. ಇಮ್ತಿಯಾಝ್ ಎಚ್ಚರಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಖಾಸಗಿ ವ್ಯಕ್ತಿಯೊಬ್ಬರು ಸರಕಾರಿ ಜಮೀನನ್ನು ಕಬಳಿಸಿದರೂ ಕೂಡ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಜಮೀನು ಕಬಳಿಸಿರುವುದರ ವಿರುದ್ಧ ನಾಗರಿಕರು ಧ್ವನಿ ಎತ್ತಿದರೂ ಕೂಡ ಸ್ಥಳೀಯ ಶಾಸಕರು ಕಬಳಿಸಿದವರ ಪರವಾಗಿ ನಿಂತಿರುವುದು ವಿಪರ್ಯಾಸ. ಉಪತಹಶೀಲ್ದಾರರು ತಪ್ಪು ವರದಿ ನೀಡಿರುವುದೇ ಈ ಎಲ್ಲ ಅವಾಂತರಗಳಿಗೆ ಕಾರಣವಾಗಿದೆ. ಹಾಗಾಗಿ ಕಂದಾಯ ಇಲಾಖೆಯ ಹಾಲಿ ಮತ್ತು ಮಾಜಿ ಅಧಿಕಾರಿ-ಸಿಬ್ಬಂದಿಯ ವಿರುದ್ಧ ಸರಕಾರ ಕಠಿಣ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದ್ದಾರೆ.

1994ರಲ್ಲಿ ಸ್ಥಾಪನೆಯಾಗಿದ್ದ ಈ ಶಾಲೆಯಲ್ಲಿ ಸುಮಾರು 250ಕ್ಕೂ ಅಧಿಕ ಮಕ್ಕಳು ಕಲಿಯುತ್ತಿದ್ದರು. ಈಗ 1ರಿಂದ 7ನೆ ತರಗತಿವರೆಗೆ ಕೇವಲ 24 ಮಕ್ಕಳಿದ್ದಾರೆ. ಇಬ್ಬರು ಶಿಕ್ಷಕರಿದ್ದಾರೆ. ಶಾಲೆಯ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿದೆ. ಶಾಲೆಯ ಸುತ್ತಮುತ್ತ ಗಿಡಗಂಟಿಗಳು ಬೆಳೆದಿವೆ. ಇದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಲು ಹೆತ್ತವರು ಹಿಂದೇಟು ಹಾಕುತ್ತಿದ್ದಾರೆ. ಶಾಲೆಯ ಈ ದುಸ್ಥಿತಿಗೆ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಬಿ.ಕೆ. ಇಮ್ತಿಯಾಝ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಸಹ ಸಂಚಾಲಕಿ ವಾರಿಜಾ, ಉಮರ್ ಫಾರೂಕ್, ಸಿಸಿಲಿಯಾ ಲೋಬೊ, ಶರೀಫ್ ಜನತಾ ಕಾಲನಿ, ಶಬನಾ, ಶ್ರೀನಾಥ್ ಕುಲಾಲ್, ಸೈಫರ್ ಅಲಿ, ಶಮೀಮ್ ಬದವಿದೆ, ಶಬೀರ್ ಅಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News