×
Ad

ಮೇ 3ರಿಂದ 12ರವರೆಗೆ ಕಾಜೂರು ಮಖಾಂ ಉರೂಸ್ ಕಾರ್ಯಕ್ರಮ

Update: 2024-04-15 13:41 IST

ಬೆಳ್ತಂಗಡಿ, ಎ.15: ಸರ್ವಧರ್ಮೀಯರ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್ನಲ್ಲಿ ಈ ವರ್ಷದ ಉರೂಸ್ ಕಾರ್ಯಕ್ರಮ ಮೇ 3ರಿಂದ 12ರ ವರೆಗೆ ವಿವಿಧ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿವೆ ಎಂದು ಉರೂಸ್ ಸಮಿತಿಯ ಅಧ್ಯಕ್ಷ ಕೆ.ಯು.ಇಬ್ರಾಹೀಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾಜೂರು ಮತ್ತು ಕಿಲ್ಲೂರು ಜಂಟಿ ಜಮಾಅತ್ ಗಳ ಆಶ್ರಯದಲ್ಲಿ ರಚನೆಯಾಗಿರುವ ಉರೂಸ್ ಸಮಿತಿಯ ನೇತೃತ್ವದಲ್ಲಿ ಉರೂಸ್ ಕಾರ್ಯಕ್ರಮಗಳು ಜರುಗಲಿವೆ. ಸಮಿತಿಯ ಗೌರವಾಧ್ಯಕ್ಷ ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಮತ್ತು ಖಾಝಿ ಸೈಯದ್ ಕೂರತ್ ತಂಙಳ್ ಮಾರ್ಗದರ್ಶನದಲ್ಲಿ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಸೈಯದ್ ಕಾಜೂರು ತಂಙಳ್ ವಹಿಸಲಿದ್ದಾರೆ. ಮೇ 3ರಂದು ಉರೂಸ್ ಸಮಾರಂಭದ ಉದ್ಘಾಟನೆಯನ್ನು ತಾ. ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸೈಯದ್ ಸಾದಾತ್ ತಂಙಳ್ ನೆರವೇರಿಸಲಿದ್ದು, ಧ್ವಜಾರೋಹಣವನ್ನು ಉರೂಸ್ ಸಮಿತಿಯ ಅಧ್ಯಕ್ಷ ಕೆ.ಯು ಇಬ್ರಾಹೀಂ ಕಾಜೂರು ನಡೆಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸೈಯದ್ ಕೂರತ್ ತಂಙಳ್ ಅಧ್ಯಕ್ಷತೆ ವಹಿಸಿ ದುಆ ಆಶೀರ್ವಚನ ನೀಡಲಿದ್ದಾರೆ. ಉರೂಸ್ ಪ್ರಯುಕ್ತ 10 ದಿನಗಳಲ್ಲಿ ಪ್ರತಿದಿನ ರಾತ್ರಿ ಕರ್ನಾಟಕ- ಕೇರಳದ ಪ್ರಸಿದ್ದ ವಾಗ್ಮಿಗಳಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಈ ಉಪನ್ಯಾಸ ಮಾಲಿಕೆಯನ್ನು ಸೈಯದ್ ಕಾಜೂರು ತಂಙಳ್ ಉದ್ಘಾಟಿಸಲಿದ್ದಾರೆ. ಮೇ 9ರಂದು ದ್ಸಿಕ್ರ್ ಮಜ್ಲಿಸ್ ನಡೆಯಲಿದೆ ಎಂದು ಅವರು ತಿಳಿಸಿದರು.

ಮೇ. 12ರಂದು ಸಂಜೆ ಸರ್ವಧರ್ಮೀಯರ ಸೌಹಾರ್ದ ಸಮಾವೇಶ ನಡೆಯಲಿದ್ದು, ಸೈಯದ್ ಕುಂಬೋಳ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಸೈಯದ್ ಜಿಫ್ರಿ ತಂಙಳ್ ಬೆಳ್ತಂಗಡಿ, ಸೈಯದ್ ಮುಖ್ತಾರ್ ತಂಙಳ್ ಕುಂಬೋಳ್, ಯೆನೆಪೊಯ ವಿವಿ ಕುಲಾಧಿಪತಿ ಡಾ.ವೈ.ಅಬ್ದುಲ್ಲ ಕುಂಞಿ, ಶಾಫಿ ಸಅದಿ ಬೆಂಗಳೂರು, ಡಾ.ಅಬ್ದುರಶೀದ್ ಝೈನಿ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಡಾ.ದೇವರ್ಸೂಲ ಅಬ್ದುಸ್ಸಲಾಂ ಮುಸ್ಲಿಯಾರ್, ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಮೊದಲಾದವರು ಭಾಗವಹಿಸಲಿದ್ದಾರೆ.

ಮೇ 12 ರಂದು ರಾತ್ರಿ ಉರೂಸ್ ಸಮಾರೋಪದಲ್ಲಿ ಮರ್ಕಝ್ ನಾಲೆಡ್ಜ್ ಸಿಟಿಯ ನಿರ್ದೇಶಕ ಡಾ.ಎ.ಪಿ.ಅಬ್ದುಲ್ ಹಕೀಂ ಅಝ್ಹರಿ ಮುಖ್ಯ ಪ್ರಭಾಷಣ ನೆರವೇರಿಸಲಿದ್ದು, ಈ ಸಮಾರಂಭದಲ್ಲಿ ಸೈಯದ್ ಕುಂಬೋಳ್ ತಂಙಳ್, ಕಾವಳಕಟ್ಟೆ ಡಾ.ಹಝ್ರತ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಲಕ್ಕಿಸ್ಟಾರ್ ಅಬ್ದುಲ್ ನಾಸಿರ್ ಸಹಿತ ಇನ್ನಿತರ ಅನೇಕ ಉಲಮಾ-ಉಮರಾ ಗಣ್ಯರುಗಳು ಭಾಗವಹಿಸಲಿದ್ದಾರೆ.

ದರ್ಗಾದ ಧಾರ್ಮಿಕ ಸಂಪ್ರದಾಯದಂತೆ ಬೆಲ್ಲದಗಂಜಿ ವಿತರಣೆ, ಉರೂಸ್ ಕೊನೆಯ ದಿನ ಸಾರ್ವಜನಿಕ ಮಹಾ ಅನ್ನದಾನ ನಡೆಯಲಿದೆ ಎಂದವರು ತಿಳಿಸಿದರು.

ಶೈಕ್ಷಣಿಕ ಪ್ರಗತಿ

ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯ ಹೆಜ್ಜೆ ಇಡುತ್ತಾ ಬಂದಿರುವ ಕಾಜೂರಿನಲ್ಲಿ ಈಗಾಗಲೇ ರಹ್ಮಾನಿಯಾ ಪ್ರೌಢ ಶಾಲೆ ನಡೆಯುತ್ತಿದ್ದು, 450 ಕ್ಕೂ ಮಿಕ್ಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ವಸತಿ ವ್ಯವಸ್ಥೆ ಒದಗಿಸುತ್ತಿದೆ. ಯಾತ್ರಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರತಿದಿನ ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ. ಕಾಜೂರು ಪರಿಸರದ ಸುತ್ತ ಮುತ್ತ ಶಿಕ್ಷಣ ವಂಚಿತ ಹೆಣ್ಣು ಮಕ್ಕಳಿಗೆ ಟೈಲರಿಂಗ್, ಶರೀಅತ್ ಸಹಿತ ಸಮನ್ವಯ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡುತ್ತಿದ್ದೇವೆ. ಜೊತೆಗೆ ಈ ಬಾರಿ 'ರಾಹ ಇಂಗ್ಲೀಷ್ ಮೀಡಿಯಂ ಪಬ್ಲಿಕ್ ಸ್ಕೂಲ್' ಎಂಬ ಹೆಸರಿನಲ್ಲಿ ಅಂಗ್ಲ ಮಾಧ್ಯಮದ 1 ರಿಂದ 8 ನೇ ತರಗತಿ ವರೆಗೆ ಶಾಲೆಗೆ ಶಿಕ್ಷಣ ಇಲಾಖೆಯಿಂದ ಅನುಮತಿ ದೊರೆತಿದೆ. ಸರಕಾರದ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೂರಂತಸ್ತಿನ 'ಮುಸಾಫಿರ್ ಖಾನಾ ಕಟ್ಟಡ'ದ ಕಾಮಗಾರಿ ಅಂತಿಮ ಹಂತ ತಲುಪಿದ್ದು ಉದ್ಘಾಟನೆಗೆ ಸನ್ನದ್ಧವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ಅಝೀಝ್ ಝುಹ್ರಿ ಕಿಲ್ಲೂರು, ಉರೂಸ್ ಸಮಿತಿಯ ಉಪಾಧ್ಯಕ್ಷ ಜೆ.ಎಚ್.ಅಬೂಬಕರ್ ಸಿದ್ದೀಕ್ ಕಾಜೂರು, ಉರೂಸ್ ಸಮಿತಿಯ ಪ್ರ. ಕಾರ್ಯದರ್ಶಿ, ಶಾಹುಲ್ ಹಮೀದ್ ಕಿಲ್ಲೂರು, ಉರೂಸ್ ಸಮಿತಿಯ ಜೊತೆ ಕಾರ್ಯದರ್ಶಿ, ಮುಹಮ್ಮದ್ ಕಮಾಲ್, ಉರೂಸ್ ಸಮಿತಿ ಕೋಶಾಧಿಕಾರಿಯ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News