ಸುರತ್ಕಲ್: ಉರುಮಾಲ್ ಕನ್ನಡ ಮಾಸಿಕದ 20ನೇ ವಾರ್ಷಿಕೋತ್ಸವ; ವಿಶೇಷಾಂಕ ಬಿಡುಗಡೆ
ವಿಶೇಷ ಚೇತನರಿಗೆ ಗಾಳಿಕುರ್ಚಿ, ಹೊಲಿಗೆ ಯಂತ್ರ ವಿತರಣೆ, ಉಚಿತ ಸಮೂಹಿಕ ವಿವಾಹ ಕಾರ್ಯಕ್ರಮ
ಸುರತ್ಕಲ್: ಇಲ್ಲಿನ ಉರುಮಾಲ್ ಕನ್ನಡ ಮಾಸಿಕದ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಸಮಾರೋಪ ಸಮಾರಂಭ, ವಿಶೇಷ ಚೇತನರಿಗೆ ಗಾಳಿಕುರ್ಚಿಗಳ ಹಸ್ತಾಂತರ, ಹೊಲಿಗೆ ಯಂತ್ರಗಳ ವಿತರಣೆ, ರಾಜ್ಯ ಮಟ್ಟದ ರಸ ಪ್ರಶ್ನೆ ಕಾರ್ಯಕ್ರಮ, ವಿದ್ಯಾರ್ಥಿವೇತನ ವಿತರಣೆ, ಐದು ಜೋಡಿಗಳ ಉಚಿತ ಸಮೂಹಿಕ ವಿವಾಹ ಹಾಗೂ ಉರುಮಾಲ್ ವಿಶೇಷಾಂಕ ಬಿಡುಗಡೆ ಕಾರ್ಯಕ್ರಮವು ರವಿವಾರ ಮಂಗಳಪೇಟೆಯಲ್ಲಿ ನಡೆಯಿತು.
ಸಮಾರಂಭವನ್ನು ಮಂಗಳಪೇಟೆ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ತಮೀಮ್ ಸಅದಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಉರುಮಾಲ್ ಮಾಸಿಕವು ಪತ್ರಿಕೋದ್ಯಮದ ಜವಾಬ್ದಾರಿಯ ಜೊತೆಗೆ ಸಾಮಾಜಿಕ ಕೆಲಸಕಾರ್ಯಗಳಲ್ಲಿ ತೊಡಗಿರುವುದು ಪ್ರಶಂಸಾರ್ಹ. ಇಂದು ಬಡ ಕುಟುಂಬಗಳನ್ನು ಗುರುತಿಸಿ ಸಾಮೂಹಿಕ ಮದುವೆ, ವಿಕಲಾಂಗರಿಗೆ ಗಾಳಿಕುರ್ಚಿಗಳ ವಿತರಣೆ ಮಾಡಿರುವುದು, ಕಲಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಅರ್ಹರಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಎಲ್ಲಾ ಮಾಧ್ಯಮಗಳಿಗೆ ಮಾದರಿಯಾಗಿದೆ. ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ರವಾನಿದೆ ಎಂದು ಶ್ಲಾಘಿಸಿದರು.
ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಅವರು ನೂತನ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಐದು ಜೋಡಿಗಳಿಗೆ ನಿಕಾಹ್ ನೆರವೇರಿಸಿ ದುವಾ ಆಶೀರ್ವಚನೆ ನೀಡಿದರು.
ಉರುಮಾಲ್ ಮಾಸಿಕದ 20ನೇ ವರ್ಷಿಕೋತ್ಸವದ ಸವಿನೆನಪಿಗಾಗಿ ಮುದ್ರಿಸಲಾದ ವಿಶೇಷಾಂಕವನ್ನು ಮಾಜಿ ಸಚಿವರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಕೆ. ಅಭಯಚಂದ್ರ ಜೈನ್ ಬಿಡುಗಡೆಗೊಳಿಸಿ ಮಾತನಾಡಿದರು.
ಇದೇ ಸಂದರ್ಭ ಸರ್ವಧರ್ಮೀಯ ಮೂವತ್ತು ಮಂದಿ ದಿವ್ಯಾಂಗರಿಗೆ ಗಾಳಿಕುರ್ಚಿಗಳು. 30ಕ್ಕೂ ಅಧಿಕ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರಗಳು ಹಾಗೂ ರಾಜ್ಯದ ಸುಮಾರು 200 ಮಂದಿ ವಿದ್ಯಾರ್ಥಿಗಳಿಗೆ ಗಣ್ಯರು ವಿದ್ಯಾರ್ಥಿವೇತನ ವಿತರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸರಕಾರದ ಮಾಜಿ ವಕ್ಫ್ ಸದಸ್ಯರಾದ ಹಾಜಿ ಎಂ.ಎ. ಹಸನಬ್ಬ ವಹಿಸಿದ್ದರು. ಅಮೀರ್ ಅಶ್ ಹರಿ ಬನ್ನೂರು ಪ್ರಾಸ್ತಾವಿಕ ಮಾತನಾಡಿದರು. ಎಂ.ಎಂ. ಸಖಾಫಿ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟರು.
ಸಮಾರಂಭದಲ್ಲಿ ಮಾಜಿ ಸಚಿವರಾದ ರಮಾನಥ ರೈ, ಶಾಸಕರಾದ ಅಶೋಕ್ ರೈ, ಕರ್ನಾಟಕ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಇಫ್ತಿಕಾರ್ ಅಲಿ, ಉದ್ಯಮಿ ಝಕರಿಯಾ ಜೋಕಟ್ಟೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಮೇಕ್ ಎ ಚೇಂಜ್ ಫೌಂಡೇಶನ್ ಅಧ್ಯಕ್ಷ ಸುಹೈಲ್ ಕಂದಕ್, ಮಂಗಳಪೇಟೆ ಎಂ.ಜೆ.ಎಂ ಅಧ್ಯಕ್ಷ ಸಿ. ಅಬ್ದುಲ್ ಹಮೀದ್, ತೀರ್ಥಹಳ್ಳಿ ನ್ಯಾಷನಲ್ ಗ್ರೂಪ್ ನ ಆಡಳಿತ ನಿರ್ದೇಶಕ ಇಬ್ರಾಹೀಂ ಶರೀಫ್, ಇಂಜಿನಿಯರ್ ಖಾಲಿದ್ ಕೃಷ್ಣಾಪುರ, ಮನಪಾ ಮಾಜಿ ಸದಸ್ಯರಾದ ಪಿ.ಬಶೀರ್ ಅಹ್ಮದ್ ಕಾಟಿಪಳ್ಳ, ಅನಿಲ್ ಕುಮಾರ್, ಪೆರ್ಮುದೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ನ ಇಬ್ರಾಹೀಂ ನವಾಝ್, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ತಾ.ಪಂ. ಮಾಜಿ ಸದಸ್ಯ ಬಶೀರ್ ಜೋಕಟ್ಟೆ, ಉದ್ಯಮಿಗಳಾದ ದಾವೂದ್ ಹಕೀಮ್, ಸೂರಿಂಜೆ ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಸೂರಿಂಜೆ, ಅಬ್ದುಲ್ ನಾಸಿರ್ ಕುದ್ರೋಳಿ, ಕಬೀರ್ ಹುಸೈನ್, ಎ. ಮೊಯ್ದೀನ್, ಕಾಟಿಪಳ್ಳ ಕೈಕಂಬದ ಗಣಪತಿ ದೇವಸ್ಥಾನದ ಮಾಜಿ ಅಧ್ಯಕ್ಷ ಧರ್ಮೇಂದ್ರ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕುದ್ರೋಳಿಯ ಚಾಬು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಎಂ.ಸಿ.ಶೇಖಬ್ಬ, ಸುರತ್ಕಲ್ ಬ್ಲಾಕ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಮುಹಮ್ಮದ್ ಶಮೀರ್ ಕಾಟಿಪಳ್ಳ, ಉಮ್ಮಿಉಮ್ಮಾತುಮ್ಮ ಫ್ಯಾಮಿಲಿ ಕಮಿಟಿಯ ಅಧ್ಯಕ್ಷ ಹಾಜಿ ಟಿ.ಪಿ.ಎಚ್. ಅಶ್ರಫ್, ಮುಹಮ್ಮದ್ ಶರೀಫ್ ಮಂಗಳಪೇಟೆ, ಮುಹಮ್ಮದ್ ರಫೀಕ್, ಉರುಮಾಲ್ ಮಾಸಿಕದ ಪ್ರಕಾಶಕರಾದ ಎಂ. ಸರ್ಫರಾಝ್ ನವಾಝ್, ದ.ಕ. ಜಿಲ್ಲಾ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಹಾರಿಸ್ ಮೊದಲಾದವರು ಉಪಸ್ಥಿತರಿದ್ದರು.
ಉರುಮಾಲ್ ಮಾಸಿಕದ ಪ್ರಕಾಶಕ ಸರ್ಪರಾಝ್ ನವಾಝ್ ಸ್ವಾಗತಿಸಿದರು. ಅಬ್ದುಲ್ ಹಮೀದ್ ಗೊಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.
ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆ:-
ಉರುಮಾಲ್ ಮಾಸಿಕದ 20 ವಾರ್ಷಿಕೋತ್ಸವ ಪ್ರಯುಕ್ತ ರಾಜ್ಯಾದ್ಯಂತ 550 ಮದ್ರಸಗಳ 34 ಸಾವಿರ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಉಮೈದಾ ಅವರು ಪ್ರಥಮ ಸ್ಥಾನ ಪಡೆದು ಕೊಂಡರೆ, ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಜೂರು ಕುಕ್ಕಾವು ನಿವಾಸಿ ಆಯಿಶತುಲ್ ಅಫೀಫಾ ದ್ವಿತೀಯ ಬಹುಮಾನ ಪಡೆದುಕೊಂಡರು.
ಪ್ರಥಮ ಬಹುಮಾನ ಪಡೆದ ಉಮೈದಾ ಅವರಿಗೆ ಉರುಮಾಲ್ ಮಾಸಿಕದಿಂದ ಚಿನ್ನದ ಉಂಗುರ ಸಹಿತ ನಗದು ಬಹುಮಾನ ನೀಡಿ ಗೌರವಿಸಲಾಯಿತು. ದ್ವಿತೀಯ ಬಹುಮಾನ ಪಡೆದ ಆಯಿಶತುಲ್ ಅಫೀಫಾ ಅವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಉರುಮಾಲ್ ರಸ ಪ್ರಶ್ನೆಯ ಫೈನಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ರಾಜ್ಯದ ವಿವಿಧ ಜಿಲ್ಲೆಯ 50 ಸ್ಪರ್ಧಾರ್ಥಿಗಳಿಗೆ ಸ್ಕೂಲ್ ಕಿಟ್ ವಿತರಿಸಲಾಯಿತು.