×
Ad

ಮಿನಿ ಒಲಿಂಪಿಕ್ ಕ್ರೀಡಾಕೂಟ: ಟೆಕ್ವಾಂಡೊ ಸ್ಪರ್ಧೆಗೆ ದ.ಕ. ಜಿಲ್ಲೆಯಿಂದ 5 ಮಂದಿ ಕ್ರೀಡಾಪಟುಗಳ ಆಯ್ಕೆ

Update: 2025-10-21 21:26 IST

ಮಂಗಳೂರು , ಅ.21: ಮುಂದಿನ ನವೆಂಬರ್ ತಿಂಗಳಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ 2025ರ 4ನೇ ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ 5 ಮಂದಿ ಟೆಕ್ವಾಂಡೊ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

35 ಕೆಜಿಗಿಂತ ಕೆಳಗಿನ ವಿಭಾಗದಲ್ಲಿ ಸುರತ್ಕಲ್ ಕೋಡಿಕೆರೆ ನಿವಾಸಿ ಆದರ್ಶ್ (ಮಹೇಶ್ ಹನುಮಪ್ಪ-ವಿಜಯಲಕ್ಷ್ಮಿ ದಂಪತಿಯ ಪುತ್ರ), 39 ಕೆ.ಜಿ ವಿಭಾಗದಲ್ಲಿ ಬೈಕಂಪಾಡಿ ನಿವಾಸಿ ಆಶಿಶ್ ಧಾಮಿ (ಲಲಿತ್ ಧಾಮಿ-ಲಕ್ಷ್ಮೀ ಧಾಮಿ ದಂಪತಿಯ ಪುತ್ರ), 38 ಕೆಜಿ ಕೆಳಗಿನ ವಿಭಾಗದಲ್ಲಿ ವಿಟ್ಲ ನಿವಾಸಿ ರಿಫಾ ಫಾತಿಮಾ (ಅಬ್ದುಸ್ಸಲಾಂ ಪಿ-ಅನೀಶಾ ಬಿಕೆ ದಂಪತಿಯ ಪುತ್ರಿ), ಕುಳಾಯಿ ನಿವಾಸಿ ಮುಹಮ್ಮದ್ ಶಿಮಾಕ್ ಅಲಿ (ಸಿರಾಜ್-ನಸೀಮಾ ದಂಪತಿಯ ಪುತ್ರ) ಹಾಗೂ 31 ಕೆಜಿ ವಿಭಾಗದಲ್ಲಿ ನಂದಾವರ ನಿವಾಸಿ ಮುಹಮ್ಮದ್ ಶಯಾನ್ (ಅಬ್ದುಲ್ ಶಮೀರ್-ಯಾಸ್ಮೀನ್ ದಂಪತಿಯ ಪುತ್ರ) ಅವರು ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.

ಕರ್ನಾಟಕ ಒಲಿಂಪಿಕ್ ಎಸೋಸಿಯೇಷನ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನವೆಂಬರ್ 3 ರಿಂದ 9ರವರೆಗೆ ಈ ಮಿನಿ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಕ್ರೀಡಾಪಟುಗಳನ್ನು ಅವರ ಅತ್ಯುತ್ತಮ ಪ್ರದರ್ಶನ ಮತ್ತು ಕ್ರೀಡೆಯ ಬದ್ಧತೆಯ ಆಧಾರದ ಮೇಲೆ ಈ ಆಯ್ಕೆ ಮಾಡಲಾಗಿದೆ. ಈ ಕ್ರೀಡಾಪಟುಗಳು ದಕ್ಷಿಣ ಕನ್ನಡ ಜಿಲಾ ತಂಡದಲ್ಲಿ ಸ್ಪರ್ಧಿಸಲಿದ್ದಾರೆ.

ದಕ್ಷಿಣ ಕನ್ನಡ ಟೆಕ್ವಾಂಡೊ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಇಸಾಕ್ ಇಸ್ಮಾಯೀಲ್ ನಂದಾವರ ಹಾಗೂ ಕೋಚ್ ಮೆಹುಲ್ ಬಂಗೇರಾ ಅವರ ನೇತೃತ್ವದಲ್ಲಿ ಎಕ್ಸ್‌ಟ್ರೀಂ ಫಿಟ್ ಆಂಡ್ ಫೈಟ್ ಕ್ಲಬ್ ಸಂಸ್ಥೆಯಲ್ಲಿ ಕ್ರೀಡಾಪಟು ಗಳು ತರಬೇತಿ ಪಡೆದಿದ್ದಾರೆ. ಆಯ್ಕೆಯಾದ ಕ್ರೀಡಾಪಟುಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ಅಧಿಕಾರಿ ಪ್ರದೀಪ್ ಡಿ ಸೋಜ ಅಭಿನಂದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News