ಫೆ.16 : ಪಿಲಾರ್‌ನಲ್ಲಿ ತುಳು ಪರ್ಬ; ಜಾನಪದ ಸಿರಿ ಪರಿಚಯ
ಮಂಗಳೂರು,ಫೆ.12: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಹಾಗೂ ಉಳ್ಳಾಲ ತಾಲೂಕಿನ ಪಿಲಾರ್ ಯುವಕ ಮಂಡಲದ ಜಂಟಿ ಆಶ್ರಯದಲ್ಲಿ ಪಿಲಾರ್‌ನ ಪಂಜಂದಾಯ ಸೇವಾ ಸನ್ನಿಧಿಯ ಮೈದಾನದಲ್ಲಿ ಫೆ.16ರಂದು ಬೆಳಗ್ಗೆ ’ತುಳು ಪರ್ಬ’ ಆಯೋಜಿಸಲಾಗಿದೆ.
ಪಿಲಾರ್ ಯುವಕ ಮಂಡಲದ ಸ್ವರ್ಣ ಮಹೋತ್ಸವದ ಪ್ರಯುಕ್ತ ನಡೆಯುವ ಈ ಕಾರ್ಯಕ್ರಮವನ್ನು ರವಿವಾರ ಬೆಳಗ್ಗೆ 9ಕ್ಕೆ ನಿವೃತ್ತ ಪ್ರಾಂಶುಪಾಲ ಪ್ರೊ.ರಾಧಾಕೃಷ್ಣ ಕೆ. ಉದ್ಘಾಟಿಸಲಿದ್ದಾರೆ. ತುಳು ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಹಿರಿಯ ಪಾರ್ದನಗಾರ್ತಿ ಕುತ್ತಾರ್ ತಿಮ್ಮಕ್ಕ ಪಾಡ್ದನದ ಬಗ್ಗೆ, ಡೋಲುವಾದಕ ರಮೇಶ್ ಮಂಚಕಲ್ ಡೋಲಿನ ಬಗ್ಗೆ, ದುಡಿವಾದಕ ಶೀನಾ ಧರ್ಮಸ್ಥಳ ದುಡಿ ವಾದನದ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಪರಿಚಯ ಮಾಡಿಕೊಡುವರು. ಈ ವೇಳೆ ಹಿರಿಯರಿಂದ ಜನಪದ ಕತೆಗಳ ದಾಖಲೀಕರಣ ನಡೆಯಲಿದೆ. ಜಾನಪದ ಸಿರಿ ವಿಚಾರ ವಿನಿಮಯದ ಬಳಿಕ ಸ್ಥಳೀಯರಿಗಾಗಿ ಗ್ರಾಮೀಣ ಆಟೋಟಗಳು ನಡೆಯಲಿದೆ ಎಂದು ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.