ಫೆ.18: ಯುವನಿಧಿ ಅರ್ಜಿ ವಿಲೇವಾರಿ ಶಿಬಿರ
ಮಂಗಳೂರು, ಫೆ.15: ಯುವನಿಧಿ ನೋಂದಣಿ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರವು ಫೆ.18ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಯುವನಿಧಿ ಯೋಜನೆಯಡಿ 2023 ಹಾಗೂ 2024ನೇ ಸಾಲಿನಲ್ಲಿ ಯಾವುದೇ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್ ಪದವಿ ಉತ್ತೀರ್ಣರಾದ ಒಳಮೊಗ್ರು, ಕೆದಂಬಾಡಿ, ಕೆಯ್ಯೂರು, ಅರಿಯಡ್ಕ ಹಾಗೂ ಕೊಳ್ತಿಗೆ ಗ್ರಾಮ ವ್ಯಾಪ್ತಿಯ ಅರ್ಹ ಅಭ್ಯರ್ಥಿಗಳು ಹಾಗೂ ಪುತ್ತೂರು ತಾಲೂಕಿನ ಇತರೆ ಗ್ರಾಪಂ ವ್ಯಾಪ್ತಿಯ ಅಭ್ಯರ್ಥಿಗಳು ಶಿಬಿರದಲ್ಲಿ ಭಾಗವಹಿಸಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗ ಅಭ್ಯರ್ಥಿಯಾಗಿರಬೇಕು. ಕರ್ನಾಟಕದಲ್ಲಿ ಕನಿಷ್ಠ 6 ವರ್ಷಗಳವರೆಗೆ ಪದವಿ/ ಡಿಪ್ಲೆೀಮಾ/ಸ್ನಾತಕೋತ್ತರ ಪದವಿವರೆಗೆ ಅಧ್ಯಯನ ಮಾಡಿರಬೇಕು.
2023 ಹಾಗೂ 2024ರ ವರ್ಷದಲ್ಲಿ ತೇರ್ಗಡೆಯಾಗಿದ್ದು, ಉತ್ತೀರ್ಣರಾಗಿ 180 ದಿನಗಳು ಕಳೆದರೂ ಉದ್ಯೋಗ ಲಭಿಸದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ದಿನದಿಂದ ಉದ್ಯೋಗ ಸಿಗುವವರೆಗೆ ಮಾತ್ರ ಅಥವಾ 2 ವರ್ಷ ಗರಿಷ್ಠ ಅವಧಿಯವರೆಗೆ ಈ ಭತ್ತೆ ಸಿಗಲಿದೆ. 2023 ಅಥವಾ 2024ರಲ್ಲಿ ಪದವಿ/ಸ್ನಾತಕೋತ್ತರ ಪದವಿ/ಡಿಪ್ಲೊಮಾ/ಇಂಜಿನಿಯರಿಂಗ್ ಉತ್ತೀರ್ಣರಾಗಿ 6 ತಿಂಗಳಾದರೂ ಉದ್ಯೋಗ ಲಭಿಸದಿರುವ ಅಭ್ಯರ್ಥಿಗಳು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವವರು ಅರ್ಜಿ ಸಲ್ಲಿಸಬಹುದು.
ಶಿಶಿಕ್ಷು (ಅಪ್ರೆಂಟಿಸ್‌ಶಿಪ್) ವೇತನ ಪಡೆಯುತ್ತಿರುವವರು, ಸರಕಾರಿ, ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು, ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿದ ವರು ಅರ್ಜಿ ಸಲ್ಲಿಸುವಂತಿಲ್ಲ. ಅಭ್ಯರ್ಥಿಗಳು ನೇರ ನಗದು ವರ್ಗಾವಣೆಗಳನ್ನು (ಡಿಬಿಟಿ) ಸ್ವೀಕರಿಸಲು ಮೊಬೈಲ್ ಸಂಖ್ಯೆಗೆ ಲಿಂಕ್ ಆದ ಆಧಾರ್ ಸಂಖ್ಯೆಯ ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.