ಜು.19: ದ.ಕ.ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ
ಮಂಗಳೂರು,ಜು.19:ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದ್ದು, ಹಲವೆಡೆ ಮನೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.ಜು.19ರಂದು ದ.ಕ.ಜಿಲ್ಲೆಗೆ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ.
ಗುರುವಾರ ರಾತ್ರಿಯಿಂದ ಶುಕ್ರವಾರ ರಾತ್ರಿಯವರೆಗೆ ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ನಿರಂತರ ಮಳೆಯಾಗಿದೆ. ಅಲ್ಲದೆ ಜಿಲ್ಲೆಯ 7 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ನಗರದ ಅಡು ಮರೋಳಿ ಶೋಭಾ ಶೆಟ್ಟಿ ಎಂಬವರ ಮನೆಯ ಎತ್ತರದ ಕಾಂಪೌಂಡ್ ಕುಸಿದು ಅಪಾರ ನಷ್ಟ ಉಟಾಗಿದೆ. ಆಸುಪಾಸಿನ ಮೂರ್ನಾಲ್ಕು ಮನೆಗಳ ಹಿಂಬದಿಯ ಗುಡ್ಡ ಕುಸಿದಿದ್ದು ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದೆ. ಶಾಸಕ ವೇದವ್ಯಾಸ ಕಾಮತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಗರದ 45ನೇ ಪೋರ್ಟ್ ವಾರ್ಡಿನ ಪಾಂಡೇಶ್ವರ ನ್ಯೂ ರೋಡ್‌ನಲ್ಲಿ ನಿರಂತರ ಮಳೆಯಿಂದಾಗಿ ಮನೆ ಹಾಗೂ ತಡೆಗೋಡೆಗೆ ಹಾನಿಯಾಗಿದೆ. ಮಾಜಿ ಕಾರ್ಪೊರೇಟರ್ ಲತೀಫ್ ಕಂದಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
*ದ.ಕ ಜಿಲ್ಲೆಯಲ್ಲಿ ಗರಿಷ್ಠ 30.1 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ಗಂಟೆಗೆ 35 ಕಿ.ಮೀ ನಿಂದ 40ಕಿ.ಮೀ.ವರೆಗೆ ಹೆಚ್ಚಳವಾಗುವ ಸಾಧ್ಯತೆಯಿದ್ದು, ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.