ಫೆ.2ರಂದು ಎಮ್ಮೆಕೆರೆ ಈಜುಕೊಳದಲ್ಲಿ ರಾಜ್ಯಮಟ್ಟದ ಈಜು ಸ್ಪರ್ಧೆ
File Photo
ಮಂಗಳೂರು, ಜ.29: ಮಂಗಳೂರು ಮಹಾನಗರ ಪಾಲಿಕೆ ಹಾಗೂ ವಿ ವನ್ ಅಕ್ವಾಟಿಕ್ ಕ್ಲಬ್ ಸಹಯೋಗದಲ್ಲಿ ಫೆ.2ರಂದು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನಿರ್ಮಿಸಿರುವ ಎಮ್ಮೆಕೆರೆ ಈಜುಕೊಳದಲ್ಲಿ ರಾಜ್ಯಮಟ್ಟದ ಈಜು ಸ್ಪರ್ಧೆ ಮೇಯರ್ ಕಪ್ ಆಯೋಜಿಸಲಾಗಿದೆ.
ಸ್ಪರ್ಧೆಯು ಬಾಲಕ ಬಾಲಕಿಯರ ಒಟ್ಟು 14 ವಿಭಾಗಗಳಲ್ಲಿ ಸ್ಪರ್ಧೆ ಜರಗಲಿದೆ. ರಾಜ್ಯದ ಹೊಸ ಪ್ರತಿಭೆಗಳಿಗೆ ವೇದಿಕೆ ನೀಡುವ ಉದ್ದೇಶದಿಂದ ನಾನ್ ಮೆಡ್ಲಿಸ್ಟ್ ವಿಭಾಗದಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಮೇಯರ್ ಮನೋಜ್ ಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
70 ವೈಯಕ್ತಿಕ ವಿಭಾಗ ಹಾಗೂ ಆರು ರಿಲೇ ವಿಭಾಗದಲ್ಲಿ ಸ್ಪರ್ಧೆಗಳನ್ನು ನಡೆಸಲಾಗುವುದು. ಮೈಸೂರು, ಬೆಂಗಳೂರು, ಬೆಳಗಾವಿ, ಮಂಡ್ಯ, ಪುತ್ತೂರು, ಹಾಸನ, ಮಂಗಳೂರು, ಉಡುಪಿ, ಕುಂದಾಪುರ, ಕಾರ್ಕಳ ಸೇರಿದಂತೆ ವಿವಿಧೆಡೆಯ 350ಕ್ಕೂ ಮಿಕ್ಕಿ ಈಜು ಪಟುಗಳು ಭಾಗವಹಿಸಲಿದ್ದಾರೆ. 50+25 ಮೀಟರ್ ಒಲಂಪಿಕ್ ಸ್ಟ್ಯಾಂಡರ್ಡ್ ಸೈಜ್‌ನ ಈಜು ಕೊಳದಲ್ಲಿ ಈ ಸ್ಪರ್ಧೆ ನಡೆಯಲಿದೆ. ತಂತ್ರಜ್ಞಾನವನ್ನು ಬಳಸಿ ಈಜುಕೂಟದ ಹೀಟ್ ಲಿಸ್ಟ್ ತಯಾರಿಸಲಾಗಿದೆ ಎಂದರು.
ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಗಳಿಸಿ ವಿಜೇತರಾದ ಈಜು ಪಟುಗಳಿಗೆ ಪದಕ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು. ಬಾಲಕ ಹಾಗೂ ಬಾಲಕಿಯರ ಪ್ರತಿಯೊಂದು ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಈಜುಪಟುವಿಗೆ ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿ ನೀಡಲಾಗುವುದು. ಸ್ಪರ್ಧಾಕೂಟದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮೂರು ತಂಡಕ್ಕೆ ಮೇಯರ್ ಕಪ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮೇಯರ್ ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಸ್ಪೀಕರ್ ಯು.ಟಿ. ಖಾದರ್, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಉಪಮೇಯರ್ ಭಾನುಮತಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಪ್ರತಿಪಕ್ಷ ನಾಯಕ ಅನಿಲ್ ಕುಮಾರ್, ಆಯುಕ್ತ ರವಿಚಂದ್ರ ನಾಯಕ್, ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಮಂಗಳೂರು ಸ್ಮಾರ್ಟ್ ಸಿಟಿಯ ಜಿ.ಎಂ. ಅರುಣ್ ಪ್ರಭಾ, ಡಿವೈಎಸ್‌ಇ ಉಪ ಆಯುಕ್ತ ಪ್ರದೀಪ್ ಡಿಸೋಜ, ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಳೀಯ ಕಾರ್ಪೊರೇಟರ್ ರೇವತಿ ಭಾಗವಹಿಸಲಿದ್ದಾರೆ. ಸಂಜೆ 5ಕ್ಕೆ ಸಮಾರೋಪ ನಡೆಯಲಿದೆ.
ವಿ ವನ್ ಅಕ್ವಾಟಿಕ್ ಕ್ಲಬ್ ಅಧ್ಯಕ್ಷ ಮಧುರಾಜ್, ನಿರ್ದೇಶಕರಾದ ನವೀನ್, ರೂಪಾ, ಈಜು ತರಬೇತುದಾರ ಲೋಕರಾಜ ವಿ.ಎಸ್. ಉಪಸ್ಥಿತರಿದ್ದರು.