×
Ad

ಜ.24: ಅಡ್ಯಾರ್ ಕಣ್ಣೂರಿನಲ್ಲಿ ಎಸ್‌ವೈಎಸ್ ರಾಜ್ಯ ಸಮ್ಮೇಳನ

Update: 2024-01-23 22:42 IST

ಮಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್‌ವೈಎಸ್)ದ 30ನೆ ವಾರ್ಷಿಕ ಮಹಾ ಸಮ್ಮೇಳನವು ಜ.24ರಂದು ಸಂಜೆ ಅಡ್ಯಾರ್ ಕಣ್ಣೂರಿನ ಷಾ ಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಹಾಜಿ ಬಿ.ಎಂ. ಮುಮ್ತಾಝ್ ಅಲಿ ಹೇಳಿದರು.

ನಗರದ ಖಾಸಗಿ ಹೊಟೇಲಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪರಂಪರೆಯ ಪ್ರತಿನಿಧಿ ಗಳಾಗೋಣ’ ಎಂಬ ಧ್ಯೇಯವಾಕ್ಯದಡಿ ನಡೆಯುವ ಈ ಸಮ್ಮೇಳನದ ಪೂರ್ವಭಾವಿಯಾಗಿ ಮಧ್ಯಾಹ್ನ 2 ಗಂಟೆಗೆ ನಗರದ ಪಡೀಲ್‌ನಿಂದ ಸಮ್ಮೇಳನ ನಡೆಯುವ ಅಡ್ಯಾರ್ ಗಾರ್ಡನ್‌ವರೆಗೆ ರ್ಯಾಲಿ ನಡೆಯಲಿದೆ. ಸಂಜೆ 4ಕ್ಕೆ ನಡೆಯುವ ಸಮ್ಮೇಳನವನ್ನು ಕರ್ನಾಟಕ ಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಕೆ.ಪಿ. ಹುಸೈನ್ ಸಅದಿ ಉದ್ಘಾಟಿಸಲಿದ್ದಾರೆ ಎಂದರು.

ಸ್ವಾಗತ ಸಮಿತಿಯ ಕೋಶಾಧಿಕಾರಿ ಕೆ.ಎಂ. ಶಾಫಿ ಸಅದಿ ಬೆಂಗಳೂರು ಮಾತನಾಡಿ ಚಿಂತಕ, ಸಾಮಾಜಿಕ ಹೋರಾಟ ಗಾರ ನಿಖಿತ್ ರಾಜ್ ಮೌರ್ಯ ‘ಭಾರತೀಯ ಪರಂಪರೆ’ಯ ಕುರಿತು ಮಾತನಾಡಲಿದ್ದಾರೆ. ಸಂಜೆ 6ಕ್ಕೆ ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಅವರ ಸಮ್ಮುಖ ನಡೆಯುವ ಸಮ್ಮೇಳನ ವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಕುಂಬೋಳ್ ಆಟಕ್ಕೋಯ ತಂಙಳ್, ಸಯ್ಯಿದ್ ಖಲೀಲುಲ್ ಬುಖಾರಿ ತಂಙಳ್, ಸಯ್ಯಿದ್ ಕೂರತ್ ತಂಙಳ್, ಝೈನುಲ್ ಉಲಮಾ ಮಾಣಿ ಉಸ್ತಾದ್, ಪೆರೋಡ್ ಅಬ್ದುರ‌್ರಹ್ಮಾನ್ ಸಖಾಫಿ, ಡಾ. ಕಾವಲಕಟ್ಟೆ ಹಝ್ರತ್ ಭಾಷಣ ಮಾಡಲಿದ್ದಾರೆ ಎಂದರು.

ಸ್ವಾಗತ ಸಮಿತಿಯ ಮುಖ್ಯ ಸಂಯೋಜಕ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್ ಮಾತನಾಡಿ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಸಚಿವ ರಹೀಂ ಖಾನ್, ಶಾಸಕರಾದ ಬಿ.ಎಂ. ಫಾರೂಕ್, ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಶಾಸಕ ಮೊಯ್ದಿನ್ ಬಾವಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ಯೆನೆಪೊಯ ವಿವಿಯ ಕುಲಾಧಿಪತಿ ವೈ. ಅಬ್ದುಲ್ಲಾ ಕುಂಞಿ, ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆಎಸ್ ಮುಹಮ್ಮದ್ ಮಸೂದ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಎಸ್‌ವೈಎಸ್ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ ಕೊಳಕೇರಿ ಮಾತನಾಡಿ ಮೂವತ್ತನೇ ವಾರ್ಷಿಕದ ಅಂಗವಾಗಿ ಹಮ್ಮಿಕೊಂಡಿದ್ದ ಒಂದು ವರ್ಷದ ಅಭಿಯಾನಕ್ಕೆ ಕಳೆದ ವರ್ಷದ ಜನವರಿ 24ರಂದು ಶಿವಮೊಗ್ಗದಲ್ಲಿ ಚಾಲನೆ ನೀಡಲಾಗಿತ್ತು. ಒಂದು ವರ್ಷದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮ, ಯೋಜನೆಯನ್ನು ಕಾರ್ಯಕತಗೊಳಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಶಕೀರ್ ಹೈಸಮ್, ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂಬಿ ಮುಹಮ್ಮದ್ ಸಾದಿಕ್ ಮಲೆಬೆಟ್ಟು, ಎಸ್‌ವೈಎಸ್ ಮಾಧ್ಯಮ ಕಾರ್ಯದರ್ಶಿ ಹಸೈನಾರ್ ಆನೆ ಮಹಲ್, ಪ್ರಮುಖರಾದ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಮುಹಮ್ಮದ್ ಅಲಿ, ಅಶ್ರಫ್ ಕಿನಾರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News