×
Ad

ಜು.26ರಂದು ಕದ್ರಿಹಿಲ್ಸ್‌ನಲ್ಲಿ ‘ಕಾರ್ಗಿಲ್ ವಿಜಯ ದಿವಸ’ ಆಚರಣೆ

Update: 2024-07-24 19:16 IST

ಮಂಗಳೂರು: ದ.ಕ. ಜಿಲ್ಲಾ ನಿವೃತ್ತ ಸೈನಿಕರ ಸಂಘ, ಸಮಗ್ರ ಕಲಿಕಾ ಕೇಂದ್ರ (ಸಿಐಎಲ್) ಸಹಕಾರದೊಂದಿಗೆ ಜು.26ರಂದು ಕದ್ರಿ ಹಿಲ್ಸ್‌ನ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ ನಡೆಯಲಿದೆ.

ದ.ಕ. ಜಿಲ್ಲಾ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ ಅವರು ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಕಾರ್ಯಕ್ರಮದ ಮಾಹಿತಿ ನೀಡಿದರು.

ಜು.26ರಂದು ಸಂಜೆ 6.30 ಕಾರ್ಗಿಲ್ ಯುದ್ಧದ ರಜತ ವರ್ಷಾಚರಣೆ ಮತ್ತು ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಹೂ-ಹಾರ ಅರ್ಪಿಸಿ , ಮೊಂಬತ್ತಿ ದೀಪ ಬೆಳಗಿಸಿ ನಮನ ಸಲ್ಲಿಸಲಾಗುವುದು. ದ್ವಿಚಕ್ರ ವಾಹನಗಳ ರ್ಯಾಲಿ ನಡೆಯಲಿದೆ. ಮಾಜಿ ಸೈನಿಕರ ಕುಟುಂಬಗಳ ಕ್ಷೇಮಕ್ಕಾಗಿ ಧನಸಹಾಯವನ್ನು ಸುರತ್ಕಲ್‌ನ ರಾಷ್ಟ್ರಭಕ್ತ ನಾಗರಿಕ ವೇದಿಕೆ ವತಿಯಿಂದ ನೀಡಲಾಗುವುದು. ವೇದಿಕೆಯ ವತಿಯಿಂದ ಈ ವರ್ಷ 20 ಮಂದಿಗೆ 5 ಲಕ್ಷ ರೂ. ಸಹಾಯಧನ ನೀಡಲಾಗುವುದು ಎಂದರು.

ಪ್ರತಿ ವರ್ಷವೂ ದ.ಕ. ನಿವೃತ್ತ ಸೈನಿಕರ ಸಂಘ ವೀರ-ಶೂರ ಸೈನಿಕರಿಗೆ, ಸಾರ್ವಜನಿಕರನ್ನು ಕೂಡಿಸಿಕೊಂಡು, ಶೃದ್ಧಾಂಜಲಿಯನ್ನು ಅರ್ಪಿಸುತ್ತದೆ. ನಿವೃತ್ತ ಸೈನಿಕರು ನಮ್ಮ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ರಾಷ್ಟ್ರಪ್ರೇಮದ ಬಗ್ಗೆ, ಶಿಸ್ತಿನ ಬಗ್ಗೆ ಮತ್ತು ಜೀವನದಲ್ಲಿ ಬಲಿದಾನದ ಬಗ್ಗೆ ಮಾಹಿತಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಇದು ನಮ್ಮ ದೇಶದ ಯುವಜನತೆಗೆ ಧೈರ್ಯ. ಉತ್ತಮ ನಡವಳಿಕೆ ಮತ್ತು ಶಿಸ್ತುಗಳ ಬಗ್ಗೆ ಮನದಟ್ಟು ಮಾಡಿ ಅವರನ್ನು ಒಂದು ಉತ್ತಮ ಪ್ರಜೆಗಳನ್ನಾಗಿ ಮಾರ್ಪಾಡಿಸಲು ಒಂದು ಹೆಜ್ಜೆಯಾಗಿದೆ ಎಂದು ಶ್ರೀಕಾಂತ್ ಶೆಟ್ಟಿ ಬಾಳ ಹೇಳಿದರು.

ಆ.8ರಂದು ನಿವೃತ್ತ ಸೈನಿಕರ ಸಮಾವೇಶ: ಕಾರ್ಗಿಲ್ ಯುದ್ಧದ ರಜತೋತ್ಸವದ ಅಂಗವಾಗಿ ಆ.೮ರಂದು ನಗರದ ಗುಜರಾತಿ ಶಾಲೆಯಲ್ಲಿ, ಶಾಲಾ ಮಕ್ಕಳೊಂದಿಗೆ ನಿವೃತ್ತ ಸೈನಿಕರ ಸಮಾವೇಶ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ರಸಪ್ರಶ್ನೆ ಸ್ಪರ್ಧೆ, ವಿಡಿಯೋ ಪ್ರದರ್ಶನದಲ್ಲಿ ಭಾರತದ ಬೇರೆ ಬೇರೆ ಯುದ್ಧಗಳ ಚಿಕ್ಕ ತುಣುಕುಗಳನ್ನು ಪ್ರದರ್ಶಿಸಲಾಗು ವುದು. ರಾಷ್ಟ್ರ ಪ್ರೇಮದ ಬಗ್ಗೆ ಹಾಡುಗಳು ಮತ್ತು ನೃತ್ಯ ಪ್ರದರ್ಶನ, ಕೆಲವು ಮಾಜಿ ಯೋಧರಿಗೆ ಸನ್ಮಾನ ಕಾರ್ಯಕ್ರಮದ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಂಘದ ಮಾಜಿ ಅಧ್ಯಕ್ಷ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಮಾತನಾಡಿ ಭಾರತೀಯ ಸಶಸ್ತ್ರ ಪಡೆ ಇತಿಹಾಸದಲ್ಲಿ 1999ರ ಜುಲೈ 26 ಎನ್ನುವುದು ಅತೀ ಮಹತ್ವದ ದಿವಸವಾಗಿದೆ. ಭಾರತದ ಗಡಿ ಭಾಗಗಳಾದ ಕಾರ್ಗಿಲ್, ದ್ರಾಸ್, ತೊಲೊಲಿಂಗ್, ಬಟಾಲಿಕ್ ಮತ್ತು ಟರ್ಟೊಕ್ ವಲಯಗಳಲ್ಲಿ ಅಕ್ರಮವಾಗಿ ಪ್ರವೇಶಿಸಿದ ಪಾಕಿಸ್ತಾನದ ಸೈನ್ಯವನ್ನು ಹೊರಗಟ್ಟಿಸಿದ ದಿವಸವಾಗಿರುತ್ತದೆ. ಇಂದಿಗೂ ಕಾರ್ಗಿಲ್ ಯುದ್ಧವು ಭಾರತೀಯ ಯೋಧರ ಧೈರ್ಯ, ಶೂರತ್ವ , ತ್ಯಾಗ, ಬಲಿದಾನಗಳ ಅದ್ಭುತ ಸಂಕೇತವಾಗಿ ಪರಿಣಮಿಸಿದೆ. ಅಸಾಧ್ಯವೆಂದು ಭಾವಿಸಿರುವ ಗುರಿಯನ್ನು ಪ್ರತಿಕೂಲ ಪರಿಸ್ಥಿತಿಯಲ್ಲೂ ಸಾಧ್ಯವಾಗಿಸಿದ ಅಮೃತ ಘಳಿಗೆಯಾಗಿದೆ ಎಂದರು.

‘ಅಪರೇಶನ್ ವಿಜಯ್’ ವೇಳೆ ಭಾರತೀಯ ಸೈನ್ಯದ 527 ಮಂದಿ ಸೈನಿಕರು (20 ಅಧಿಕಾರಿಗಳು, 23 ಕಿರಿಯ ಅಧಿಕಾರಿಗಳು, 484 ಸೈನಿಕರು) ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದರು. 1363 ಮಂದಿ ಸೈನಿಕರು ಗಾಯ ಗೊಂಡಿದ್ದರು. ಪಾಕಿಸ್ತಾನದ 453 ಮಂದಿ ಸೈನಿಕರು ಮೃತಪಟ್ಟಿದ್ದರು. 665 ಮಂದಿ ಗಾಯಗೊಂಡಿದ್ದರು ಎಂದು ಶರತ್ ಭಂಡಾರಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ದೀಪಕ್ ಅಡ್ಯಂತಾಯ, ಕೋಶಾಧಿಕಾರಿ ಸಿಪಿಒ ಸುಧೀರ್ ಪೈ, ಸಿಐಎಲ್ ಸಂಸ್ಥೆಯ ನಿರ್ದೇಶಕಿ ಸಚಿತ ನಂದಗೋಪಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News