ಜೂ.3ರಂದು ಮಂಗಳೂರು ವಿವಿಯಲ್ಲಿ ಡಾ.ಬಿ.ಎ.ವಿವೇಕ ರೈಗೆ ಅಭಿನಂದನೆ
Update: 2025-06-01 16:09 IST
ಕೊಣಾಜೆ, ಜೂ.1: ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಅಧ್ಯಕ್ಷರಾಗಿ ಬಳಿಕ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಹಾಗೂ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಗಳ ಕುಲಪತಿಯಾಗಿ ಸೇವೆ ಸಲ್ಲಿಸಿರುವ ವಿದ್ವಾಂಸ ಡಾ.ಬಿ.ಎ ವಿವೇಕ ರೈಯವರು ಕರ್ನಾಟಕ ಸರಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಅಭಿವಂದನ ಸಮಾರಂಭ ಏರ್ಪಡಿಸಿದೆ.
ಮಂಗಳೂರು ವಿವಿಯ ಡಾ.ಯು.ಆರ್.ರಾವ್ ಸಭಾಂಗಣದಲ್ಲಿ ಜೂ.3ರಂದು ಬೆಳಗ್ಗೆ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ ಧರ್ಮ ವಹಿಸಲಿದ್ದಾರೆ.
ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪಗೌಡ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕುಲಸಚಿವ ಕೆ.ರಾಜು ಮೊಗವೀರ ಶುಭಾಶಂಸನೆ ಮಾಡಲಿದ್ದಾರೆ ಎಂದು ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ ಸೋಮಣ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.