ಆ.4ರಂದು ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾವಳಿ
ಮಂಗಳೂರು, ಜು.31: ದ.ಕ. ಜಿಲ್ಲಾ ಪುಟ್ಬಾಲ್ ಸಂಸ್ಥೆಯ ಆಶ್ರಯದಲ್ಲಿ ಅಂತರ್ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು, ಪದವಿ ಕಾಲೇಜಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ 27ನೇ ವರ್ಷದ ಫುಟ್ಬಾಲ್ ಪಂದ್ಯಾವಳಿ ಆಗೋಸ್ಟ್ 4ರಿಂದ ಆ.15ರ ತನಕ ನಡೆಯ ಲಿದೆ ಎಂದು ದ.ಕ. ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಅಸ್ಲಂ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ನೆಹರೂ ಮೈದಾನಕ್ಕೆ ಹೊಸ ಟರ್ಪ್ ಅಳವಡಿಸಿದ ನಂತರ ಈ ಪಂದ್ಯಾವಳಿಯನ್ನು ಆ ಮೈದಾನದಲ್ಲಿ ನಡೆಸ ಬೇಕೆಂದು ಬಯಕೆ ನಮ್ಮದಾಗಿತ್ತು. ಆದರೆ ಭಾರೀ ಮಳೆಯ ಕಾರಣ ಕಾಮಗಾರಿ ವಿಳಂಬವಾಗಿದೆ, ಇದೀಗ ಎರಡು ತಾಣಗಳಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಬಾಲಕರ ಹಾಗೂ ಬಾಲಕಿಯರ ಪಂದ್ಯಾವಳಿಗಳು ನಗರದ ಕರಾವಳಿ ಉತ್ಸವ ಮೈದಾನದಲ್ಲಿ, ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ಪಂದ್ಯಾಟ ನಗರದ ಹೊರಭಾಗದ ಮಂಜನಾಡಿ ಗ್ರಾಮದ ಕಿನ್ಯಾದ ಯೆನೆಪೋಯ ಯುನಿವರ್ಸಿಟಿ ಕ್ಯಾಂಪಸ್ ಮೈದಾನದಲ್ಲಿ ನಡೆಯಲಿದೆ ಎಂದು ಹೇಳಿದರು.
ಸುಮಾರು 200ಕ್ಕೂ ಅಧಿಕ ಶಾಲಾ ಕಾಲೇಜು ತಂಡ ಈಗಾಗಲೇ ನೋಂದಾಯಿಸಿದ್ದು, 12 ದಿನಗಳ ಕಾಲ ಈ ಪಂದ್ಯಾಟ ನಡೆಯಲಿದೆ. ಆ.15ರಂದು ಸ್ವಾತಂತ್ರ್ಯ ದಿನಾಚರಣೆಯಂದು ಫೈನಲ್ ಪಂದ್ಯಾಟಗಳು ನಡೆಯಲಿದೆ ಎಂದು ಡಿ.ಎಂ. ಅಸ್ಲಂ ವಿವರಿಸಿದರು.
ಮಂಗಳೂರಿನ ಹೊರ ಭಾಗದ ಹಲವು ಶಾಲಾ ಕಾಲೇಜುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದೆ. ಸುಮಾರು 75 ವರ್ಷಗಳಿಂದ ಪುಟ್ಬಾಲ್ ಪಂದ್ಯಾಟ ನಡೆಸುತ್ತಾ ಬರುತ್ತಿರುವ ನಮ್ಮ ಸಂಸ್ಥೆ ಇಂಡಿಪೆಂಡೆನ್ಸ್ ಕಪ್ ಪಂದ್ಯಾವಳಿ ಆರಂಭಿಸಿದ ನಂತರ ಹಲವಾರು ಆಟಗಾರರು ರಾಷ್ಟ್ರ, ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಅದರಲ್ಲೂ ಹಲವು ಬಾಲಕಿಯರು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ ಎಂದರು.
ಈ ಪಂದ್ಯಾವಳಿಯನ್ನು ಮಂಗಳೂರು ನಗರ ದಕ್ಷಿಣದ ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಲಿದ್ದು, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಫುಟ್ಬಾಲ್ ಸಂಸ್ಥೆ ಸದಸ್ಯ ವಿಜಯ ಸುವರ್ಣ, ಖಜಾಂಚಿ ಫಿರೋಝ್, ಸದಸ್ಯರಾದ ಅನಿಲ್ ಪಿ.ವಿ , ಲತೀಫ್ ಕಸಬಾ ಬೆಂಗ್ರೆ ಮತ್ತು ಅಸ್ಫಾಕ್ ಉಪಸ್ಥಿತರಿದ್ದರು.