×
Ad

ಫೆ.4ರಿಂದ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನೇಮೋತ್ಸವ

Update: 2026-02-02 21:40 IST

ಸುರತ್ಕಲ್‌ : ಪರಮಪವಿತ್ರ ಕ್ಷೇತ್ರ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲು ಇದರ ಜೀರ್ಣೋದ್ಧಾರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಫೆ.4 ರಿಂದ 10ರ ವರೆಗೆ ನಿರಂತರ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವವು ಜರುಗಲಿದೆ.

ಈ ಸಂಬಂಧ ದೈವಸ್ಥಾನದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸಿ.ಬಿ.ಕರ್ಕೇರ ಅವರು, ಬಡವರೇ ಇರುವ ಸಸಿಹಿತ್ಲು ಎಂಬ ಇಷ್ಟು ಸಣ್ಣ ಗ್ರಾಮದಲ್ಲಿ ನಾಲ್ಕು ಕರೆ ಸಮಾಜ ಒಟ್ಟಾಗಿ ಸುಮಾರು 3.5 ಕೋಟಿ ರೂ. ವೆಚ್ಚದ ಸಂಪೂರ್ಣ ಶಿಲಾಮಯ ದೈವಸ್ಥಾನ ನಿರ್ಮಾಣ ಮಾಡಲಾ ಗಿದ್ದು, ನಮ್ಮ ಹೃದಯಂತರಾಳದ ಮನವಿಗೆ ದಾನಿಗಳು ಸಕಾರಾತ್ಮವಾಗಿ ಸ್ಪಂದಿಸಿದ ಫಲ. ಅಲ್ಲದೆ, ಉಳ್ಳಾಯ ಮತ್ತು ಪರಿವಾರ ದೈವಗಳ ಕಾರಣಿಕ ಎಂದರು.

ದೈವಸ್ಥಾನದ ಒಳಾಂಗಣದಲ್ಲಿ ಫೆ.4 ರಿಂದ 8 ರ ತನಕ ನಿರಂತರ ವೈದಿಕ ವಿಧಿ ವಿಧಾನಗಳು, ಋತ್ವಿಜರ ನೇತೃತ್ವ ದಲ್ಲಿ ನಡೆಯುತ್ತಿದ್ದರೆ ಹೊರಾಂಗಣದಲ್ಲಿ ಹಾಕಿರುವ ಎರಡು ವೇದಿಕೆಯಲ್ಲಿ ಪ್ರತ್ಯೇಕವಾಗಿ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಒಂದು ವೇದಿಕೆಗೆ "ಉಳ್ಳಾಯ ಮದಿಪು ಚಾವಡಿ" ಎಂಬ ಹೆಸರಿಡಲಾ ಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ವೇದಿಕೆಗೆ ಕಾಂತುಲಕಣ ಗಡಿಪ್ರದಾನ ಯಾನೆ ಪಠೇಲ್ ಯಾದವ ಜಿ. ಬಂಗೇರ ಸಾಂಸ್ಕೃತಿಕ ವೇದಿಕೆ ಎಂದು ಹೆಸರಿಡಲಾಗಿದೆ. ಫೆ.4ರಿಂದ 8ರ ವರೆಗೆ ನಿರಂತರ ಭಜನಾ ಕಾರ್ಯಕ್ರಮ ನಡೆಯಲಿದ್ದು, ಈ ವೇದಿಕೆಗೆ "ಕಾಂತಾಬಾರೆ ಬುಧಾಬಾರೆ ಭಜಕ ವೇದಿಕೆ" ಎಂದು ಹೆಸರಿಡಲಾಗಿದೆ ಎಂದರು.

ಶ್ರೀ ಉಳ್ಳಾಯ ಹಾಗೂ ಪರಿವಾರ ಶಕ್ತಿಗಳಿಗೆ ಪ್ರಧಾನಗೊಂಡ ಕಾಂತಾಬಾರೆ ಬುಧಾಬಾರೆ ಮತ್ತು ಮಾಯಂದಾಳ ದೈವಕ್ಕೆ ಪ್ರತ್ಯೇಕ ಗುಡಿ ನಿರ್ಮಾಣ ಮಾಡಲಾಗಿದ್ದು, ಎದುರಿನ ಗೋಪುರ ನವೀಕರಣ ಹಾಗೂ ಪ್ರವೇಶದ್ವಾರ ಉದ್ಘಾಟನೆ ನಡೆಯಲಿದೆ. ಜೀರ್ಣೋದ್ಧಾರ ಯಶಸ್ಸಿಗೆ ಊರಿನ ಜೀರ್ಣೋದ್ಧಾರ, ಆಡಳಿತ ಹಾಗೂ ಮಹಿಳಾ ಸಮಿತಿ ಗಳ ಜೊತೆಗೆ ಮುಂಬೈ, ಬೆಂಗಳೂರು ಸೇರಿದಂತೆ ಹೊರನಾಡು ಸಮಿತಿಗಳ ಸಹಕಾರವೇ ಕಾರಣವಾಗಿದೆ. ವಿವಿಧ ಉಪಸಮಿತಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ವಾಹನಗಳ ಪಾರ್ಕಿಂಗ್, ಭದ್ರತೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ರೂಪಿಸಲಾಗಿದೆ ಎಂದು ನುಡಿದರು.

ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ.ಬಿ. ಕರ್ಕೇರ, ಗೌರವಾಧ್ಯಕ್ಷ ಮಿಥುನ್ ರೈ, ಗೌರವ ಸಲಹೆಗಾರರಾದ ಸತ್ಯಜಿತ್ ಸುರತ್ಕಲ್ ಮತ್ತು ಚಣ್ಯದ್ರಶೇಖರ ನಾನಿಲ್, ಕಾರ್ಯಾಧ್ಯಕ್ಷ ಪರಮಾನಂದ ವಿ. ಸಾಲ್ಯಾನ್, ಆಡಳಿತ ಸಮಿತಿಯ ಅಧ್ಯಕ್ಷ ಜಗನ್ನಾಥ ಆರ್. ಕೋಟ್ಯಾನ್, ಉಪಾಧ್ಯಕ್ಷ ಅನಿಲ್ ಪೂಜಾರಿ, ಕೋಶಾಧಿಕಾರಿ ಎಸ್. ದಯಾನಂದ್, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಶ್ರೀಧರ ವಿ. ಸುವರ್ಣ, ಮುಂಬೈ ಸಮಿತಿಯ ಅಧ್ಯಕ್ಷ ಸತೀಶ್‌ ಎನ್. ಕೋಟ್ಯಾನ್ ಹಾಗೂ ಸಂಚಾಲಕ ಪದ್ಮನಾಭ ಸಸಿಹಿತ್ಲು, ಜೊತೆಗೆ ಗೌರವ ಸಲಹೆಗಾರರಾದ ಪದ್ಮನಾಭ ಬಂಗೇರ ಮತ್ತು ರಮೇಶ್ ಪಿ. ಸನಿಲ್, ಕಾಂತುಲಕಣ ಗಡಿಪುದಾನರಾದ ನಿರಂಜನ್ ಬಂಗೇರ ಹಾಗೂ ಲೀಲಾಧರ ಬಂಗೇರ, ಪ್ರಧಾನ ಅರ್ಚಕ ತೋಚೋಡಿ ಶೇಖರ ಪೂಜಾರಿ, ಅರ್ಚಕರಾದ ಸುರೇಶ್ ಪೂಜಾರಿ ಮತ್ತು ದಾಮೋದರ ಪೂಜಾರಿ, ಮಹಿಳಾ ಸಮಿತಿಯ ಅಧ್ಯಕ್ಷೆ ಶಕುಂತಳಾ ಭೋಜ ಬಂಗೇರ ಹಾಗೂ ಗೌರವಾಧ್ಯಕ್ಷೆ ಪುಷ್ಪಾ ದಯಾನಂದ್‌, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಎಸ್.ಆರ್. ಪ್ರಭಾತ್, ಆಡಳಿತ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್, ಜೊತೆ ಕಾರ್ಯದರ್ಶಿ ಹರೀಶ್ ಕುಮಾ‌ರ್, ಜೊತೆ ಕೋಶಾಧಿಕಾರಿ ಯತೀಶ್ ಸಾಲ್ಯಾನ್ ಮತ್ತು ಮಾಧ್ಯಮ ಸಂಚಾಲಕ ಯಶೋಧರ ಕೋಟ್ಯಾನ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News