ಕೊಲೆಯತ್ನ ಪ್ರಕರಣ: ಆರೋಪಿಗೆ ಶಿಕ್ಷೆ
ಮಂಗಳೂರು, ಫೆ.2: ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಕುರುಡುಕಟ್ಟೆ ಎಂಬಲ್ಲಿ ತನ್ನ ಮಗನ ಜಾಗದಲ್ಲಿ ಸೊಪ್ಪುಕತ್ತರಿಸುತ್ತಿದ್ದ ವೆಂಕಪ್ಪನಾಯ್ಕ ಎಂಬವರಿಗೆ ಜಾತಿ ನಿಂದನೆ ಮಾಡಿ ಹಲ್ಲೆಗೈದ ಆರೋಪಿ ನಾರಾಯಣ ಗೌಡ ಎಂಬಾತನಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯವು 20,500 ರೂ. ದಂಡ ವಿಧಿಸಿ ಆದೇಶ ನೀಡಿದೆ.
2019ರ ಮೇ 6ರಂದು ವೆಂಕಪ್ಪನಾಯ್ಕ ತನ್ನ ಮಗ ದೇವಪ್ಪನಾಯ್ಕರ ಜಾಗದಲ್ಲಿ ಸೊಪ್ಪುಕತ್ತರಿಸುತ್ತಿದ್ದಾಗ ನಾರಾಯಣ ಗೌಡ, ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಕಬ್ಬಿಣದ ರಾಡ್‌ನಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸಹಾಯಕ ಪೊಲೀಸ್ ಅಧೀಕ್ಷಕ ಸೈದುಲ್ ಅಡಾವತ್ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ನ್ಯಾಯಾಧೀಶ ಜಗದೀಶ ವಿ.ಎನ್ ಪ್ರಕರಣದ ವಿಚಾರಣೆ ನಡೆಸಿ ಆರೋಪಿ ನಾರಾಯಣ ಗೌಡನಿಗೆ ಶಿಕ್ಷೆ ವಿಧಿಸಿದ್ದಾರೆ. ದಂಡದ ಪೈಕಿ 20 ಸಾವಿರ ರೂ. ಸಂತ್ರಸ್ತ ವೆಂಕಪ್ಪನಾಯ್ಕಗೆ ನೀಡಬೇಕು. 500 ರೂ. ವನ್ನು ಸರಕಾರಕ್ಕೆ ಪಾವತಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.
ಸರಕಾರದ ಪರವಾಗಿ ಜ್ಯೋತಿ ಪ್ರಮೋದ ನಾಯಕ ವಾದಿಸಿದ್ದಾರೆ.