×
Ad

ಮಹಿಳೆಯರ ಸಾಧನೆಯು ಆಶಾದಾಯಕ ಬೆಳವಣಿಗೆ: ಡಾ. ಮೋಹನ ಆಳ್ವ

ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ

Update: 2026-02-02 21:28 IST

ಮಂಗಳೂರು,ಫೆ.2: ದೇಶದ 144 ಕೋಟಿ ಜನ ಸಂಖ್ಯೆಯ ಮಾನವ ಸಂಪತ್ತುಗಳ ಪೈಕಿ ಬಹುತೇಕ ಮಹಿಳೆಯರು ಇದ್ದಾರೆ. ಮಹಿಳೆಯರು ಸಮಾಜದಲ್ಲಿ ದೊಡ್ಡ ಶಕ್ತಿಯಾಗಿದ್ದಾರೆ. ಮಹಿಳೆಯರಿಗೆ ಸಮಾಜದಲ್ಲಿ ಅಪಾರ ಗೌರವವೂ ಇದೆ. ಪ್ರತೀ ವ್ಯಕ್ತಿಯ ಯಶಸ್ಸಿನ ಹಿಂದೆ ಮಹಿಳೆಯ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದ್ದಾರೆ.

ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಮಹಿಳಾ ಸಶಕ್ತೀಕರಣದ ಸಲುವಾಗಿ ನಗರದ ಪುರಭವನದಲ್ಲಿ ಸೋಮವಾರ ನಡೆದ ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ -ಮಹಿಳಾ ವೈಭವ 2026-ರ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸ್ತ್ರಿಶಕ್ತಿ ರಾಜ್ಯ ಒಕ್ಕೂಟದ ರಾಜ್ಯಾಧ್ಯಕ್ಷೆ ರೆಹನಾ ಸುಲ್ತಾನ್ ಎಂ.ಎಂ. ಮಾತ ನಾಡಿ ಜನರಿಗೆ ನೆರವಾಗಬೇಕೆನ್ನುವ ನಿಟ್ಟಿನಲ್ಲಿ ಸ್ತ್ರೀ ಶಕ್ತಿ ಸಂಘಗಳ ಮೂಲಕ ಸಮಾಜ ಸೇವೆಗೆ ಮುಂದಾಗಿದ್ದೇವೆ. ಇದನ್ನು ಜವಾಬ್ದಾರಿ ಎಂದು ಪರಿಗಣಿಸದೆ ಹವ್ಯಾಸವಾಗಿ ಬಳಸಿಕೊಳ್ಳಬೇಕು. ಅದರಿಂದ ಸಿಗುವ ಆತ್ಮತೃಪ್ತಿಗೆ ಮಿತಿ ಇಲ್ಲ. ಮಹಿಳೆಯರು ಸ್ತ್ರೀ ಶಕ್ತಿ ಸಂಘಗಳ ಮೂಲಕ ಒಟ್ಟಾಗಿ ಮುನ್ನಡೆದಲ್ಲಿ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ವಿದೆ ಎಂದರು.

ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ ಜಾಗೃತ ಹೆಣ್ಣು ಸಮಾಜದ ಕಣ್ಣಾಗಿದ್ದು, ಎಲ್ಲಾ ಮಹಿಳೆಯರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಮಹಿಳಾ ಸಂಘಟನೆಗಳು ಸಮಾಜ ಸೇವೆಯ ಮೂಲಕ ನೊಂದವರ ಬಾಳಿಗೆ ಬೆಳಕಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಚಂಚಲ ತೇಜೋಮಯಾ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ, ಆದರೆ ರಾಜಕೀಯದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಅಪರೂಪಕ್ಕೆ ಎಂಬಂತೆ ಮಹಿಳೆಯರು ರಾಜಕೀಯದಲ್ಲಿ ಕಾಣುತ್ತಿದ್ದೇವೆ. ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು. ಅವರಲ್ಲಿರುವ ಪ್ರತಿಭೆಗಳಿಗೆ ವೇದಿಕೆ ಒದಗಿಸಬೇಕು. ಪ್ರತೀ ಮಹಿಳೆಯರು ಹೊಸ ಅವಕಾಶಗಳನ್ನು ಸೃಷ್ಟಿಸಬೇಕು. ಇದಕ್ಕಾಗಿ ಮಹಿಳೆಯರು ತಮ್ಮ ಸಂಘಟನೆಗಳ ಮೂಲಕ ಬಲಗೊಳ್ಳಬೇಕು ಎಂದರು.

ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ಶಿಶು ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್ ಮಾತನಾಡಿದರು. ಹಾಸನ ಜಿಲ್ಲೆಯ ಶೋಭಾ ರಾಣಿ, ಉಡುಪಿಯ ಶೋಭಾ, ವಸಂತಿ ರಾವ್ ಅನಿಸಿಕೆ ವ್ಯಕ್ತಪಡಿಸಿದರು. ಪ್ರಮುಖರಾದ ವಿಜಯಲಕ್ಷ್ಮಿ, ಭಾರತಿ ಎಂ., ದೇವಕಿ ಅಚ್ಯುತ್ತ, ದಯಾಮಣಿ, ಸುನಿತಾ, ಗಾಯತ್ರಿ ಬಿ.ಎಸ್., ಶೈಲಾ ರಾವ್, ವಿಜಯಲಕ್ಷ್ಮಿ ಶೆಟ್ಟಿ, ಸುಕಾಲಾಕ್ಷಿ ಸುವರ್ಣ, ರೇಖಾ ಶೆಟ್ಟಿ, ಭಾರತಿ ಎಂ., ಅನುರಾಧ ರಾಜೀವ್, ಪ್ರೇಮಾ ಮಾಧವ್, ಲತಾ ಎಂ. ಶೆಟ್ಟಿ, ನಾಗವೇಣಿ, ಜ್ಯೋತಿ, ರಮಣಿ ಬೋಳೂರು, ರಮಣಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಒಕ್ಕೂಟದ ಉಪಾಧ್ಯಕ್ಷೆ ಮನೋರಮ ಉಮೇಶನ್ ಸ್ವಾಗತಿಸಿದರು. ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News