ಅ.5-6: ಮಂಗಳೂರಿನಲ್ಲಿ ಸಿಐಟಿಯು ದ.ಕ. ಜಿಲ್ಲಾ ಸಮ್ಮೇಳನ
ಮಂಗಳೂರು, ಅ.1: ಕಾರ್ಮಿಕ ಕಾನೂನುಗಳ ರಕ್ಷಣೆಗಾಗಿ, ಕನಿಷ್ಟ ಕೂಲಿ, ಪಿಂಚಣಿ, ಸಾಮಾಜಿಕ ಭದ್ರತೆಗಾಗಿ, ಜಿಲ್ಲೆಯ ಸೌಹಾರ್ದ ಪರಂಪರೆಯ ಉಳಿವಿಗಾಗಿ ಎಂಬ ಘೋಷವಾಕ್ಯದೊಂದಿಗೆ ಕೇಂದ್ರ ಕಾರ್ಮಿಕ ಸಂಘಟನೆ ಸಿಐಟಿಯು ಇದರ ದ.ಕ.ಜಿಲ್ಲಾ 18ನೇ ಸಮ್ಮೇಳನವು ಅ.5 ಮತ್ತು 6ರಂದು ನಗರದ ಬೋಳಾರದಲ್ಲಿರುವ ಎಸ್‌ಕೆ ಟೈಲ್ ವರ್ಕರ್ಸ್ ಯೂನಿಯನ್‌ನ ಸಭಾಂಗಣದಲ್ಲಿ ನಡೆಯಲಿದೆ.
ಅ.5ರಂದು ಬೆಳಗ್ಗೆ 10ಕ್ಕೆ ಸಿಐಟಿಯು ರಾಜ್ಯ ಉಪಾಧ್ಯಕ್ಷ ಡಾ. ಕೆ. ಪ್ರಕಾಶ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಎನ್. ಪ್ರತಾಪ್ ಸಿಂಹ ಭಾಗವಹಿಸಲಿದ್ದಾರೆ. ದ.ಕ.ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು.
ಬಳಿಕ ಎರಡು ದಿನಗಳ ಕಾಲವೂ ಪ್ರತಿನಿಧಿ ಅಧಿವೇಶನ ನಡೆಯಲಿದೆ. ಜಿಲ್ಲಾದ್ಯಂತ ವಿವಿಧ ವಿಭಾಗದ ಕಾರ್ಮಿಕ ಸಂಘಟನೆಗಳಿಂದ ಆಯ್ಕೆಯಾಗಿ ಬರುವ 200ಕ್ಕೂ ಮಿಕ್ಕಿದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬಳಿಕ ನೂತನ ನಾಯಕತ್ವವನ್ನು ಸಮ್ಮೇಳನವು ಆಯ್ಕೆಗೊಳಿಸಲಿದೆ. ಅ.6ರಂದು ಸಂಜೆ 4ಕ್ಕೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.