ಡಿ.27ರಂದು 9ನೇ ವರ್ಷದ ಮಂಗಳೂರು ಕಂಬಳ
ಮಂಗಳೂರು: ನಗರದ ಗೋಲ್ಡ್ ಫಿಂಚ್ ಸಿಟಿಯ ರಾಮ -ಲಕ್ಷ್ಮಣ ಜೋಡುಕರೆಯಲ್ಲಿ ಹೊನಲು-ಬೆಳಕಿನ 9ನೇ ವರ್ಷದ ಮಂಗಳೂರು ಕಂಬಳ ಡಿ.27ರಂದು ನಡೆಯಲಿದೆ ಎಂದು ಮಂಗಳೂರು ಕಂಬಳ ಸಮಿತಿಯ ಅಧ್ಯಕ್ಷ , ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ನಗರದ ಗೋಲ್ಡ್ ಫಿಂಚ್ ಹೋಟೆಲ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 9ನೇ ವರ್ಷದ ಕಂಬಳದಲ್ಲಿ 9 ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ನಗರದಲ್ಲಿ ಕಂಬಳವನ್ನು ಉಳಿಸಿ ಬೆಳೆಸಬೇಕು.ನಗರದಲ್ಲಿ ನೆಲೆಸಿರುವ ದೇಶವಿದೇಶದ ಜನರಿಗೆ ತುಳು ಸಂಸ್ಕೃತಿಯ ಪರಿಚಯವಾಗಬೇಕು. ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ತುಳುನಾಡಿನ ಸಂಸ್ಕೃತಿಯ ಪರಿಚಯ ಹತ್ತಿರದಿಂದ ಆಗಬೇಕು ಎಂಬ ಉದ್ದೇಶದಿಂದ ಕಂಬವನ್ನು ಆಯೋಜಿಸಲಾಗುತ್ತದೆ ಎಂದರು.
ಕಂಬಳದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಈ ಬಾರಿಯ ಕಂಬಳದಲ್ಲಿ 9 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬ್ರಿಟಿಷರ ವಿರುದ್ಧ ಹೋರಾಡಿದ ತುಳುನಾಡಿನ ರಾಣಿ ಅಬ್ಬಕ್ಕನ ಚಾರಿತ್ರಿಕ ಚಿತ್ರಕಲಾ ಪ್ರದರ್ಶನ, ವಂದೇ ಮಾತರಂನ 150ನೇ ವರ್ಷಾಚರಣೆಯ ಅಂಗವಾಗಿ 150 ವಿದ್ಯಾರ್ಥಿನಿಯರಿಂದ ‘ವಂದೇ ಮಾತರಂ’ ಸಾಮೂಹಿಕ ಗಾಯನ, ಪರಿಸರ ಸ್ನೇಹಿಯಾದ ಪ್ರಧಾನ ಮಂತ್ರಿಯ ಸಂಕಲ್ಪ ‘ಏಕ್ ಪೇಡ್ ಮಾ ಕ ನಾಮ್’ ಎಂಬ ಕಾರ್ಯಕ್ರಮದಂತೆ ತಾಯಿ ಹೆಸರಲ್ಲಿ ಒಂದು ಗಿಡ ನೆಡಲು ಗಿಡಗಳ ವಿತರಣೆ, ಬ್ಯಾಕ್ ಊರು ಪರಿಕಲ್ಪನೆಯಲ್ಲಿ ವಿದೇಶದಿಂದ ಊರಿಗೆ ವಾಪಸ್ ಬಂದು ಉದ್ಯಮ ಆರಂಭಿಸಿ, ಯಶಸ್ವಿಯಾಗಿರುವ 9 ಮಂದಿ ಉದ್ಯಮಿಗಳಿಗೆ ಸನ್ಮಾನ, ವೃದ್ಧಾಶ್ರಮದ ನಿವಾಸಿಗಳನ್ನು ಕರೆದುಕೊಂಡು ಬಂದು ಕಂಬಳವನ್ನು ಪರಿಚಯಿಸಲಾ ಗುವುದು, ಈ ಚಟುವಟಿಕೆಗಳೊಂದಿಗೆ ನಾಲ್ಕು ಸ್ಪರ್ಧೆಗಳು ‘ರಂಗ್ ದ ಕೂಟ’, ಮಂಗಳೂರು ಕಂಬಳದ ರೀಲ್ಸ್, ಮಂಗಳೂರು ಕಂಬಳದ ಫೋಟೋಗ್ರಾಫಿ, ಎಐ ಕ್ರಿಯೇಟಿವ್ ಯೋಧ ಸ್ಪರ್ಧೆ ನಡೆಯಲಿದೆ. ಮಂಗಳೂರು ಕಂಬಳ ತುಳುನಾಡಿನ ಸಂಸ್ಕೃತಿಯ ಹಬ್ಬವಾಗಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಮಂಗಳೂರು ಕಂಬಳ ಬೆಳಗ್ಗೆ 8:30ಕ್ಕೆ ಉದ್ಘಾಟನೆಯಾಗಲಿದೆ. ಗರೋಡಿ ಬ್ರಹ್ಮ ಬೈದರ್ಕಳ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಉದ್ಘಾಟನೆ ನೆರವೇರಿಸಲಿರುವರು.ಸಭಾ ಕಾರ್ಯಕ್ರಮ ಸಂಜೆ 6 ಗಂಟೆಗೆ ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು , ಬಹುಮಾನ ವಿತರಣೆ ರವಿವಾರ ಬೆಳಗ್ಗೆ ನಡೆಯಲಿದೆ ಎಂದು ವಿವರಿಸಿದರು.
ಕಂಬಳದಲ್ಲಿ ನೇಗಿಲು ಕಿರಿಯ, ನೇಗಿಲು ಹಿರಿಯ, ಹಗ್ಗ ಹಿರಿಯ, ಹಗ್ಗ ಕಿರಿಯ, ಅಡ್ಡ ಹಲಗೆ ಮತ್ತು ಕನೆಹಲಗೆ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.160-170 ಕೋಣಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದನ್ನು ನಿರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿಯ ಸಂಚಾಲಕ ಸಾಂತ್ಯಗುತ್ತು ಸಚಿನ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ಮಂಗಲ್ಪಾಡಿ, ಪ್ರಮುಖರಾದ ಸಂಜಯ ಪ್ರಭು, ಪ್ರಸಾದ್ ಕುಮಾರ್ ಶೆಟ್ಟಿ, ವಿಜಯಕುಮಾರ್ ಕೆಂಗಿನ ಮನೆ, ಜೋಯ್ಲಸ್ ಡಿ ಸೋಜ, ಕಿರಣ್ ಕುಮಾರ್ ಕೋಡಿಕಲ್, ವಸಂತ ಜೆ ಪೂಜಾರಿ, ಅವಿನಾಶ್ ಸುವರ್ಣ, ಬಟ್ಟಿರ ಅಜಿತ್ ಭೋಪಯ್ಯ,ಅಭಿಷೇಕ್ ರೈ ಕುಳಾಲು, ಗುರುಚಂದ್ರ ಹೆಗ್ಡೆ ,ಈಶ್ವರ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.