ಎಐ ಆಧಾರಿತ ಕ್ಯಾಮರಾ ಅಳಡಿಸಲು ಕ್ರಮ: ಡಿಜಿಪಿ ಅಲೋಕ್ ಕುಮಾರ್
ಮಂಗಳೂರು ಜೈಲಿಗೆ ಭೇಟಿ- ಪರಿಶೀಲನೆ
ಮಂಗಳೂರು, ಡಿ.23: ಜೈಲುಗಳಲ್ಲಿ ಸುರಕ್ಷತೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಪರಪ್ಪನ ಅಗ್ರಹಾರ, ಮೈಸೂರಿನಲ್ಲಿ ಪ್ರಾಯೋಗಿಕವಾಗಿ ಎಐ ಆಧಾರಿತ ಕ್ಯಾಮರಾ ಮೂಲಕ ತಪಾಸಣಾ ವ್ಯವಸ್ಥೆ ನಡೆಯುತ್ತಿದೆ. ಅಲ್ಲಿ ಯಶಸ್ಸು ಆದ ಬಳಿಕ ಮಂಗಳೂರು ಸೇರಿದಂತೆ ಇತರ ಜೈಲುಗಳಲ್ಲೂ ಅಳವಡಿಸಲು ಕ್ರಮ ವಹಿಸಲಾಗುವುದು ಎಂದು ರಾಜ್ಯ ಕಾರಾಗೃಹ ವಿಭಾಗದ ನೂತನ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ನಾನು ರಾಜ್ಯ ಬಂಧಿಖಾನೆ ಇಲಾಖೆ ಎಡಿಜಿಪಿ ಅಕಾರ ಸ್ವೀಕರಿಸಿದ ಬಳಿಕ ರಾಜ್ಯದ ನಾನಾ ಜೈಲುಗಳಿಗೆ ಭೇಟಿ ನೀಡಿ, ಪರಿಶೀಲಿಸುತ್ತಿದ್ದೇನೆ. ರಾಜ್ಯದಲ್ಲಿ ಇರುವ 54 ಕಾರಾಗೃಹಗಳಿದ್ದು ಕಾಲಕಾಲಕ್ಕೆ ಅವುಗಳ ಪರಿಶೀಲನೆ ಮಾಡಬೇಕಾಗಿದೆ. ಮಂಗಳೂರು ಸೂಕ್ಷ್ಮ ಕಾರಾಗೃಹವಾಗಿದೆ. ಸೋಮವಾರ ರಾತ್ರಿಯೂ ಮಂಗಳೂರು ಜೈಲಿನಲ್ಲಿ ಪರಿಶೀಲನೆ ವೇಳೆ ಮೊಬೈಲ್ ಪತ್ತೆಯಾಗಿತ್ತು ಎಂಬ ಮಾಹಿತಿ ಲಭಿಸಿದೆ. ಜೈಲಿನೊಳಗೆ ಮೊಬೈಲ್ ಹಾಗೂ ನಿಷೇಧಿತ ವಸ್ತುಗಳು ಸರಬರಾಜಾಗುತ್ತಿರುವ ಬಗ್ಗೆ ತನಿಖೆ ನಡೆಸಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಜಾಮರ್ ವ್ಯವಸ್ಥೆಯ ಸಮಸ್ಯೆಗಳ ಕುರಿತಂತೆ ಕಳೆದ 15 ವರ್ಷಗಳಿಂದ ಕೇಳುತ್ತಿದ್ದೇನೆ. ಕೆಲವೊಂದು ಲೋಪ ದೋಷಗಳಿರುವುದು ಕಂಡು ಬಂದಿದೆ. ಈ ಬಗ್ಗೆ ಈಗಾಗಲೇ ಟಿಸಿಐಎಲ್‌ನವರಿಗೆ, ಡಿಪಾರ್ಟ್‌ಮೆಂಟ್ ಆಫ್ ಟೆಲಿಕಾಂ, ಬಿಎಸ್‌ಎನ್‌ನವರು ಸೇರಿದಂತೆ ಸಂಬಂಧಪಟ್ಟವರ ಜತೆ ಚರ್ಚಿಸಿದ್ದೇವೆ. ಕಾಲಾವಕಾಶ ನೀಡಲಾಗಿದೆ. ಮಂಗಳೂರಿನಲ್ಲಿಯೂ ಈ ಸಮಸ್ಯೆ ಬಗ್ಗೆ ಗಮನ ಹರಿಸಲಾಗುವುದು ಎಂದರು.
ಜೈಲನ್ನು ನಿಯಂತ್ರಿಸಿದರೆ ಶೇ. 60ರಷ್ಟು ಕಾನೂನು ವ್ಯವಸ್ಥೆ ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಿದ ಅಲೋಕ್ ಕುಮಾರ್, ಮುಡಿಪುವಿನಲ್ಲಿ ನೂತನ ಜೈಲು ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದರ ಪರಿಶೀಲನೆ ನಡೆಸಲಾಗು ವುದು. ಅದರ ಕಾಮಗಾರಿ ಪೂರ್ಣಗೊಳಿಸಲು ಅನುದಾನ ಅಗತ್ಯವಿದ್ದು, ಗೃಹ ಸಚಿವರ ಬಗ್ಗೆ ಈ ಬಗ್ಗೆ ಮಾತನಾಡುತ್ತೇನೆ. ಸ್ಥಳೀಯ ಶಾಸಕರು ಈ ಬಗ್ಗೆ ಆಸಕ್ತಿ ವಹಿಸಿ ಒತ್ತಡ ಹೇರಿದರೆ ಸುಲಭವಾಗಲಿದೆ ಎಂದರು.
ಜಿಲ್ಲಾ ಕಾರಾಗೃಹದ ಪ್ರವೇಶ ದ್ವಾರದಲ್ಲಿ ಕಾರಾಗೃಹ ಸಿಬ್ಬಂದಿಯಿಂದ ಗೌರವರಕ್ಷೆಯ ಮೂಲಕ ಡಿಜಿಪಿ ಅಲೋಕ್ ಕುಮಾರ್‌ರನ್ನು ಸ್ವಾಗತಿಸಲಾಯಿತು.
ಈ ಸಂದರ್ಭ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ದಕ್ಷಿಣ ಕನ್ನಡ ಪೊಲೀಸ್ ಅಧೀಕ್ಷಕ ಅರುಣ್ ಕೆ., ಡಿಸಿಪಿಗಳಾದ ಮಿಥುನ್ ಎಚ್.ಎನ್., ರವಿಶಂಕರ್, ಜೈಲು ಅಧೀಕ್ಷಕ ಶರಣ ಬಸಪ್ಪ, ಉಪಸ್ಥಿತರಿದ್ದರು.
‘ಕಾರಾಗೃಹದ ಒಳಗಡೆ ಗಲಾಟೆ ಮಾಡಿರುವಂತಹ ಕೈದಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯವಾಗಿದೆ. ಇನ್ನೂ ಆ ರೀತಿ ಇರುವರನ್ನು ಬೇರೆಡೆ ಕಳುಹಿಸಲು ಕ್ರಮ ವಹಿಸಲಾಗುವುದು. ದುಡ್ಡು ಹಾಗೂ ಇತರ ಸಮಸ್ಯೆಯಿಂದಾಗಿ ಜೈಲಿನಿಂದ ಹೊರ ಬರಲು ಆಗದವರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಹೊರ ಬರಲು ಸಹಕರಿಸಲಾಗುವುದು. ಒಳ್ಳೆಯ ನಡೆಯಿಂದ ಇರುವವರನ್ನು ಸರಕಾರದ ಗಮನಕ್ಕೆ ತರುವ ಹಾಗೂ ಸರಿಯಾಗಿ ಇಲ್ಲದವರನ್ನು ಕಾರಾಗೃಹ ಕಾಯ್ದೆ ಪ್ರಕಾರ ಕಾನೂನುಕ್ರಮ ಜರಗಿಸಲಾಗುವುದು’ ಎಂದು ಡಿಜಿಪಿ ಅಲೋಕ್ ಕುಮಾರ್ ಹೇಳಿದರು.