ಮಾನವೀಯ ಮೌಲ್ಯದ ತಳಹದಿಯೊಂದಿಗೆ ದೇಶ ಕಟ್ಟೋಣ: ಮೌಲಾನ ಸೈಯದ್ ಅಬ್ದುಲ್ ಅಲಿ ಹಸನಿ ನದ್ವಿ
ಎಐಪಿಐಎಫ್ ವತಿಯಿಂದ ಚಿಂತನ - ಮಂಥನ ಕಾರ್ಯಕ್ರಮ
ಮಂಗಳೂರು: ದೇಶದಲ್ಲಿ ನಾನಾ ವಿಚಾರಗಳಿಗೆ ಸಂಬಂಧಿಸಿ ವೈವಿಧ್ಯತೆ ಕಂಡು ಬಂದರೂ ಕೂಡ ಮಾನವೀಯತೆಯು ಏಕತೆಗೆ ಪ್ರಬಲ ಅಸ್ತ್ರವಾಗಿದೆ. ಹಾಗಾಗಿ ಎಲ್ಲರೂ ಕೂಡ ಮಾನವೀಯ ಮೌಲ್ಯದ ತಳಹದಿಯೊಂದಿಗೆ ಚಳುವಳಿ ರೂಪದಲ್ಲಿ ದೇಶ ಕಟ್ಟಬೇಕಿದೆ ಎಂದು ಮೌಲಾನ ಸೈಯದ್ ಅಬ್ದುಲ್ ಅಲಿ ಹಸನಿ ನದ್ವಿ ಹೇಳಿದರು.
ಆಲ್ ಇಂಡಿಯಾ ಪಾಯಮ್-ಎ-ಇನ್ಸಾನಿಯತ್ ಫೋರಂ (ಎಐಪಿಐಎಫ್) ವತಿಯಿಂದ ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಗರದ ಕಂಕನಾಡಿಯಲ್ಲಿರುವ ಇಖ್ರಾ ಅರಬಿಕ್ ಸ್ಕೂಲ್‌ನಲ್ಲಿ ಗುರುವಾರ ನಡೆದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾನವೀಯತೆಯ ಬಗ್ಗೆ ನಾಡಿನ ಪ್ರತಿಯೊಬ್ಬರೂ ಕೂಡ ಮಾತನಾಡುತ್ತಾರೆ. ಆದರೆ ಅದು ಕಾರ್ಯಗತಗೊಳ್ಳು ತ್ತಿಲ್ಲ. ಐಕ್ಯತೆಯ ಬದಲು ವಿಭಜನೆಯ ಧ್ವನಿ ಎದ್ದು ಕಾಣುತ್ತಿದೆ. ಇದು ದೇಶದ ಪ್ರಗತಿಗೆ ಮಾರಕವಾಗಿದೆ. ಹಾಗಾಗಿ ಜಾತ್ಯತೀತ ಪರಂಪರೆ, ಪ್ರಜಾಪ್ರಭುತ್ವ ಮೌಲ್ಯವನ್ನು ಎತ್ತಿಹಿಡಿಯುವುದರ ಜೊತೆಗೆ ಶಾಂತಿಪಾಲನೆ ಎಲ್ಲರ ಧ್ಯೇಯವಾಗಬೇಕು. ಪರಸ್ಪರ ಅಪನಂಬಿಕೆಯನ್ನು ದೂರ ಮಾಡಿ ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕಿದೆ ಎಂದು ಮೌಲಾನ ಸೈಯದ್ ಅಬ್ದುಲ್ ಅಲಿ ಹಸನಿ ನದ್ವಿ ಕರೆ ನೀಡಿದರು.
ದೇಶದಲ್ಲಿ ಹಸಿವು, ಬಡತನ, ಶಿಶುಮರಣ, ಅನಾರೋಗ್ಯದ ಪ್ರಮಾಣ ಹೆಚ್ಚುತ್ತಿದೆ. ವೈದ್ಯರ ಕೊರತೆಯೂ ಇದೆ. ಶಿಕ್ಷಣ ಇನ್ನೂ ಎಲ್ಲರಿಗೂ ಸಿಕ್ಕಿಲ್ಲ. ಸ್ವಾತಂತ್ರ್ಯ ಲಭಿಸಿ 78 ವರ್ಷ ಕಳೆದರೂ ನಾವು ʼಗರೀಬಿ ಹಠಾವೋʼ ಎಂಬ ಘೋಷವಾಕ್ಯದಲ್ಲೇ ಕಾಲ ಕಳೆಯುತ್ತಿದ್ದೇವೆ. ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡು ಕೊಳ್ಳುವ ಬದಲು ಭಾವನಾತ್ಮಕ ವಿಚಾರ ಮೇಳೈಸುತ್ತಿದೆ. ರೋಗವಾಗಿ ಪರಿಣಮಿಸಿರುವ ಪ್ರತಿಕ್ರಿಯೆಯ ಬದಲು ಪ್ರಕ್ರಿಯೆಯು ಔಷಧವಾಗಬೇಕಿದೆ. ಅಸಮಾನತೆ ದೂರ ಮಾಡಲು ದೂರದೃಷ್ಟಿಯ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಸಭೆಯಲ್ಲಿ ಪಾಲ್ಗೊಂಡ ಪ್ರಮುಖರು ಅಭಿಪ್ರಾಯಪಟ್ಟರು.
ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟಲಿನೊ, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಪತ್ರಕರ್ತ ಎನ್.ವಿ. ಪೌಲೋಸ್, ಎನ್.ಜಿ.ಮೋಹನ್, ಧೀರಜ್ ಉದ್ಯಾವರ, ರಾಜಾ ಚೆಂಡ್ತಿಮಾರ್, ಉದಯ ಆಚಾರ್ಯ, ರಘುವೀರ್ ಸೂಟರ್‌ಪೇಟೆ, ಯೋಗಿಶ್ ಶೆಟ್ಟಿ ಜೆಪ್ಪು ಮತ್ತಿತರರು ಮಾತನಾಡಿದರು.
ಮುಹಮ್ಮದ್ ಫರ್ಹಾನ್ ನದ್ವಿ ಕಾರ್ಯಕ್ರಮ ನಿರೂಪಿಸಿದರು.