PM CARES, ಚುನಾವಣಾ ಬಾಂಡ್ ಬಗ್ಗೆ ಪ್ರಹ್ಲಾದ್ ಜೋಶಿ ಉತ್ತರಿಸಲಿ : ಸಚಿವ ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
ಮಂಗಳೂರು : PM CARES ಅನ್ನು ಸರಕಾರಿ ಟ್ರಸ್ಟ್ ಎಂದು ಘೋಷಿಸಿ ಯಾಕೆ ದುಡ್ಡು ಸಂಗ್ರಹಿಸಿದ್ದು, ಎಷ್ಟು ಹಣ ಸಂಗ್ರಹ ಆಗಿದೆ, ಎಷ್ಟು ಉಪಯೋಗ ಆಗಿದೆ ಹಾಗೂ ಚುನಾವಣಾ ಬಾಂಡ್‌ನಲ್ಲಿ ಸಾವಿರಾರು ಕೋಟಿ ರೂ. ಲೂಟಿ ಮಾಡಲಾಗಿದ್ದು, ಅದರ ಬಗ್ಗೆ ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿಯವರು ಉತ್ತರಿಸಲಿ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ
ಮಂಗಳೂರಿನಲ್ಲಿ ಶುಕ್ರವಾರ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಜಾಹೀರಾತು ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಪ್ರಹ್ಲಾದ್ ಜೋಶಿಯವರ ಆರೋಪದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಈ ಸವಾಲು ಹಾಕಿದರು.
ಬಿಜೆಪಿ ಮತ್ತು ಪ್ರಹ್ಲಾದ್ ಜೋಶಿಯವರಿಗೆ ಈ ರೀತಿಯ ಮಾತನಾಡುವುದೇ ಆಗಿದೆ. ಚುನಾವಣಾ ಬಾಂಡ್‌ನಲ್ಲಿ ಸಾವಿರಾರು ಕೋಟಿ ರೂ. ಯಾರ್ಯಾರಿಂದ ಎಷ್ಟು ಲೂಟಿ ಮಾಡಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಇದು ದೊಡ್ಡ ಮೋಸ. PM CARES ಎಂದು ಘೋಷಣೆ ಮಾಡಿ ಎಲ್ಲಾ ಸರಕಾರಿ ನೌಕರರಿಂದ ಹಣ ಪಡೆದರು. ಅದು ಖಾಸಗಿ ಟ್ರಸ್ಟ್ ಆದರೆ ಅದಕ್ಕಾಗಿ ಪಿಎಂ ಹೆಸರನ್ನು ಯಾವ ರೀತಿ ದುರುಪಯೋಗ ಪಡಿಸಬೇಕು. ನ್ಯಾಷನಲ್ ಹೆರಾಲ್ಡ್ ಇತಿಹಾಸ ಇರುವ ಪತ್ರಿಕೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಪತ್ರಿಕೆ. ಅದಕ್ಕೆ 2 ಕೋಟಿ ರೂ. ಜಾಹೀರಾತು ಕೊಟ್ಟಿರುವುದಕ್ಕೆ ದೊಡ್ಡ ವಿಷಯ ಮಾಡುತ್ತಿರುವಾಗ ಮಾಧ್ಯಮದವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ವಿಷಯಾಂತರ ಮಾಡಲು ಕಳಂಕ ಇಲ್ಲದಿರುವ ಜಾಗದಲ್ಲೂ ಕಳಂಕ ತರಲು ಪ್ರಯತ್ನಿಸಲಾಗುತ್ತಿದೆ. ಇವರು ಸಾವಿರಾರು ಕೋಟಿ ರೂ. ಚುನಾವಣಾ ಬಾಂಡ್ಸ್, PM CARES ಮೂಲಕ ಮಾಡಿದ್ದಾರೆ. ದೇಶದ ಆಸ್ತಿಯನ್ನು ಕೆಲವೇ ಕೆಲವರಿಗೆ ಕೊಡುತ್ತಿದ್ದಾರೆ. ಇದು ದೊಡ್ಡ ವಿಷಯ. ಆದರೆ ಕಾನೂನು ರೀತಿಯಲ್ಲಿ ಪತ್ರಿಕೆಗೆ ನೀಡಿರುವ ಜಾಹೀರಾತಿನ ವಿಷಯ ಮಾತನಾಡುತ್ತಿದ್ದಾರೆ. ರಾಜ್ಯ ಸರಕಾರ ಪ್ರತಿ ದಿನ ಹಲವು ಪತ್ರಿಕೆಗಳಿಗೆ ಜಾಹೀರಾತು ನೀಡುತ್ತಿದೆ. ನೂರಾರು ಕೋಟಿ ರೂ. ಖರ್ಚಾಗುತ್ತಿದೆ ಎಂದು ಅವರು ಹೇಳಿದರು.
ಆರೆಸ್ಸೆಸ್‌ನವರು ಚಾಣಕ್ಯ ವಿವಿಗೆ ಸಾವಿರಾರು ಕೋಟಿ ರೂ.ಗಳಿಗೂ ಅಧಿಕ ಹಣ ಸಂಗ್ರಹ ಮಾಡಿದ್ದಾರೆ. ಆರೆಸ್ಸೆಸ್‌ನವರಿಗೆ ಇಂತಹ ಸಂಸ್ಥೆಗಳನ್ನು ರಚನೆ ಮಾಡುವುದು ದುಡ್ಡು ಸಂಗ್ರಹಿಸುವುದೇ ಕೆಲಸ. ಇದನ್ನು ಯಾರೂ ಕೇಳುವಂತಿಲ್ಲ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಲಾಭರಹಿತ ಸಂಸ್ಥೆ. ಅಂತಹ ಸಂಸ್ಥೆಯಲ್ಲಿ ಕಳಂಕ ಇದೆ ಎಂದು ಅದೆಷ್ಟೋ ವರ್ಷಗಳಿಂದ ಆರೋಪಿಸುತ್ತಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿಯನ್ನು ಕರೆಸಿ ಇಡೀ ದಿನ ಕಚೇರಿಯಲ್ಲಿ ಕೂರಿಸಿ, ಸಂಸತ್ತಿನಿಂದ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿ ಸೇಡಿನ ಕೀಳು ಮಟ್ಟದ ರಾಜಕಾರಣ ಮಾಡುತ್ತಿರುವ ಬಗ್ಗೆ ಜೋಶಿಯವರು ತಿಳಿದು ಮಾತನಾಡಬೇಕು. ಮಾಧ್ಯಮ ಅವರ ಜತೆಗಿದೆ. ಯಾವ ಪ್ರಶ್ನೆ ಅವರಲ್ಲಿ ಕೇಳಬೇಕೋ ಅದನ್ನು ಕೇಳುವುದಿಲ್ಲ. ನಮ್ಮನ್ನು ಮಾತ್ರ ಮಾಧ್ಯಮ ಕೇಳುತ್ತಾರೆ. ಅವರನ್ನು ಮಾಧ್ಯಮ ಕೇಳಲಿ. PM CARESನಲ್ಲಿ ಹೇಗೆ ಹಣ ಸಂಗ್ರಹಿಸಲಾಗಿದೆ ಎಂಬುದನ್ನು ಕೇಳಲಿ. ಪ್ರಧಾನ ಮಂತ್ರಿ ಹೆಸರು ಆ ಟ್ರಸ್ಟ್‌ಗೆ ಯಾಕೆ ಇಡಲಾಗಿದೆ ಎಂದು ಕೇಳಿ ಎಂದು ದಿನೇಶ್ ಗುಂಡೂರಾವ್ ಹೇಳಿದರು.