×
Ad

ಕುದುರೆಮುಖ ಅರಣ್ಯವಾಸಿಗಳ ಸ್ಥಳಾಂತರಕ್ಕೆ ಯೋಜನೆ: ಸಚಿವ ಈಶ್ವರ ಖಂಡ್ರೆ

Update: 2026-01-09 14:32 IST

ಮಂಗಳೂರು, ಜ.9: ಕುದುರೆಮುಖ ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗಿದ್ದು, ಅದನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಶುಕ್ರವಾರ ಲಾಲ್‌ಬಾಗ್‌ನ ಕರಾವಳಿ ಉತ್ಸವ ಮೈದಾನದ ಎದುರು ಉಪ ಅರಣ್ಯ ಸಂರಕ್ಷಣಾಧಿಕಾರಿ ವಸತಿ ಗೃಹದ ನೂತನ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕರ್ನಾಟಕ ಅರಣ್ಯ ಇಲಾಖೆ ದೇಶದಲ್ಲೇ ಮಾದರಿಯ ಇಲಾಖೆಯಾಗಿ ಮೊದಲ ಸ್ಥಾನದಲ್ಲಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಎಲ್ಲೆಡೆ ಕಮಾಂಡ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರಿನಲ್ಲಿ ಇಂಟೆಗ್ರೇಟೆಡ್ ಕಮಾಂಡಿಂಗ್ ಸೆಂಟರ್ ಉದ್ಘಾಟಿಸಲಾಗಿದೆ ಎಂದು ಅವರು ಹೇಳಿದರು.

ಮಾನವ–ಪ್ರಾಣಿ ಸಂಘರ್ಷ ತಡೆಗಟ್ಟಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹುಲಿ ಹಾಗೂ ಆನೆಗಳಿಂದ ಉಂಟಾಗುವ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಗಮನ ನೀಡಲಾಗಿದೆ. ಆನೆ ಸಮಸ್ಯೆ ಕುರಿತಂತೆ ವಿಧಾನ ಪರಿಷತ್‌ನಲ್ಲಿ ಪ್ರಶ್ನೆ ಕೇಳಲಾಗಿದ್ದು, ಅದರಂತೆ ಆನೆ ಕಾರ್ಯಪಡೆ ರಚಿಸಲಾಗುತ್ತಿದೆ. ಆನೆಗಳ ಚಲನವಲನವನ್ನು ನಿಯಂತ್ರಿಸಿ ಮಾನವ–ಪ್ರಾಣಿ ಸಂಘರ್ಷವನ್ನು ತಡೆಯಲು ಈ ಕಾರ್ಯಪಡೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಇದಲ್ಲದೆ, 1926 ಹೆಲ್ಪ್‌ಲೈನ್‌ಗೆ ಬಂದ ಯಾವುದೇ ದೂರು ತಕ್ಷಣವೇ ಸಂಬಂಧಪಟ್ಟ ವಿಭಾಗಕ್ಕೆ ರವಾನೆಯಾಗುತ್ತದೆ. ಸಂಬಂಧಿತ ಆರ್‌ಎಫ್‌ಒ ಮತ್ತು ಡಿಎಫ್‌ಒಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಆನೆಗಳು ಅರಣ್ಯ ಪ್ರದೇಶದ ಹೊರಗೆ ಬಂದಲ್ಲಿ ಕಮಾಂಡ್ ಸೆಂಟರ್ ಮೂಲಕ ಸಂಬಂಧಪಟ್ಟ ರೇಂಜ್‌ಗೆ ತಕ್ಷಣ ಮಾಹಿತಿ ತಲುಪಿಸಲಾಗುತ್ತದೆ. ರೈತರ ಬೆಳೆ ಹಾನಿಯ ಕುರಿತು ಮಹಜರು ನಡೆಸುವ ಪ್ರಕ್ರಿಯೆಯೂ ಕಮಾಂಡ್ ಸೆಂಟರ್ ಮೂಲಕವೇ ನಡೆಯಲಿದೆ ಎಂದು ಸಚಿವರು ವಿವರಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News