×
Ad

ಪ್ರಾಣಿ ಕಲ್ಯಾಣ ಸಂಸ್ಥೆಗಳು ಸಲ್ಲಿಸಿದ ಅರ್ಜಿ ಆಲಿಕೆಗೆ ಆಗ್ರಹಿಸಿ ಜ.4ರಂದು ಅಖಿಲ ಭಾರತ ಮಟ್ಟದ ಪ್ರತಿಭಟನೆ

Update: 2025-12-31 15:26 IST

ಮಂಗಳೂರು, ಡಿ.31: ಬೀದಿ ನಾಯಿಗಳಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನವೆಂಬರ್ 7ರಂದು ನೀಡಿರುವ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಪ್ರಾಣಿ ಕಲ್ಯಾಣ ಸಂಸ್ಥೆಗಳು ಸಲ್ಲಿಸಿದ ಹಸ್ತಕ್ಷೇಪ ಅರ್ಜಿಗಳನ್ನು ಆಲಿಸಲು ಅವಕಾಶ ನೀಡುವಂತೆ ಆಗ್ರಹಿಸಿ ಜ. 4ರಂದು ಅಖಿಲ ಭಾರತ ಮಟ್ಟದ ಪ್ರತಿಭಟನೆ ಆಯೋಜಿಸಲಾಗಿದೆ. ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ಬೆಳಗ್ಗೆ 9.30ಕ್ಕೆ ಈ ಪ್ರತಿಭಟನೆ ನಡೆಯಲಿದೆ ಎಂದು ಆನಿಮಲ್ ಕೇರ್ ಟ್ರಸ್ಟ್‌ನ ಟ್ರಸ್ಟಿ ನ್ಯಾಯವಾದಿ ಸುಮಾ ನಾಯಕ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬೀದಿ ನಾಯಿಗಳ ಸಂಖ್ಯೆ ಕಡಿಮೆ ಮಾಡಲು ವೈಜ್ಞಾನಿಕ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಅನುಸರಿಸಬೇಕು. ಅದಕ್ಕಾಗಿ ಪ್ರಾಣಿ ಸಂತಾನ ನಿಯಂತ್ರಣ ಕೇಂದ್ರಗಳನ್ನು ತೆರೆಯಬೇಕು ಎಂದು ಹೇಳಿದರು.

ಮಂಗಳೂರಿನಲ್ಲಿ ಈಗಾಗಲೇ ವ್ಯವಸ್ಥಿತವಾಗಿ ಇಂತಹ ಕೇಂದ್ರವು ಕಾರ್ಯಾಚರಿಸುತ್ತಿದೆ. ಆದರೆ ಒಂದು ಕೇಂದ್ರ ಸಾಕಾಗದು. ದಿನನಿತ್ಯ ನಗರದ ಪ್ರಮುಖ ಭಾಗಗಳಲ್ಲಿ ಸಾಕು ಪ್ರಾಣಿಗಳ ಮಾಲಕರು ತ್ಯಜಿಸಿದ ನಾಯಿಗಳಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಂಗಳೂರಿನಲ್ಲಿ ಇಂತಹ ಕನಿಷ್ಟ ಇನ್ನೆರಡು ಕೇಂದ್ರಗಳ ಅಗತ್ಯವಿದೆ ಎಂದು ಅವರು ಹೇಳಿದರು.

ನಗರದ್ಲಿ ನಾಯಿ ಕಡಿತಗಳ ಪ್ರಕರಣಗಳು ಮಾಲಕರಿಂದ ತ್ಯಜಿಸಿದ ನಾಯಿಗಳಿಂದಲೇ ಸಂಭವಿಸುತ್ತವೆ. ಹಾಗಾಗಿ ಸಾಕು ಪ್ರಾಣಿಗಳಿಗೆ ನೋಂದಣಿ, ಸಂತಾನಹರಣ ಚಿಕಿತ್ಸೆ ಮತ್ತು ಲಸಿಕೆಗಳನ್ನು ಕಡ್ಡಾಯಗೊಳಿಸಬೇಕು.

ಕಚ್ಚಿದ ಇತಿಹಾಸ ಇರುವ ಅಥವಾ ಪಶು ವೈದ್ಯರು ಪ್ರಮಾಣೀಕರಿಸಿದ ಆಕ್ರಮಣಕಾರಿ ನಡವಳಿಕೆಯ ನಾಯಿಗಳಿಗೆ ಮಾತ್ರ ಅವಕಾಶ ಕಲ್ಪಿಸಲು ನಾಯಿ ಆಶ್ರಯ ತಾಣಗಳನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದರು.

ಹಣಕ್ಕಾಗಿ ನಾಯಿ ಮತ್ತು ಬೆಕ್ಕಿನ ಮರಿಗಳನ್ನು ಅಜಾಗರೂಕತೆಯಿಂದ ಬ್ರೀಡಂಗ್ ಮಾಡುವುದು ಹಾಗೂ ಇವುಗಳನ್ನು ತ್ಯಜಿಸುವುದರಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಾಣಿ ಸಂತಾನ ನಿಯಂತ್ರಣ ನಿಯಮ 2023ರ ಪ್ರಕಾರ ಬೀದಿ ಪ್ರಾಣಿಗಳಿಗೆ ಆಹಾರ ತಾಣಗಳನ್ನು ಗುರುತಿಸಬೇಕು. ಮಂಗಳೂರು ಮಹಾನಗರ ಪಾಲಿಕೆಗೆ ಈಗಾಗಲೇ ಈ ಬಗ್ಗೆ ಮನವಿ ಸಲ್ಲಿಸಲಾಗಿದ್ದು, ಈ ಆಹಾರ ವಲಯಗಳ ವಾರ್ಡ್‌ವಾರು ಪಟ್ಟಿಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ನಗರಗಳಲ್ಲಿ ಅಲ್ಲಲ್ಲಿ ಸಾಕು ನಾಯಿಗಳನ್ನು ತ್ಯಜಿಸುತ್ತಿರುವಂತೆಯೇ ಪರ್ವತ ಪ್ರದೇಶ, ಕಾಡು ಪ್ರದೇಶಗಳಲ್ಲಿಯೂ ಮರಿಗಳನ್ನು ತ್ಯಜಿಸುವ ಪ್ರಕ್ರಿಯೆ ಹೆಚ್ಚುತ್ತಿದೆ. ನಾಯಿಗಳು ಶಿಕಾರಿ ಮಾಡುವ ಹವ್ಯಾಸ ಹೊಂದಿಲ್ಲದ ಕಾರಣ ಅವುಗಳಿಗೆ ಈ ರೀತಿಯ ಅನ್ಯಾಯ ಮಾಡಬಾರದು ಎಂದು ಪ್ರಾಣಿಗಳ ದೌರ್ಜನ್ಯ ತಡೆ ಸಮಾಜದ ಪ್ರಮುಖರಾದ ಹರೀಶ್ ರಾಜಕುಮಾರ್ ತಿಳಿಸಿದರು.

ಬೀದಿ ನಾಯಿಗಳು ಆಹಾರ ಸಿಗದೆ ಆಕ್ರಮಣಕಾರಿಯಾಗಿ ವರ್ತಿಸಬಹುದೇ ಹೊರತು ಇಲ್ಲವಾದಲ್ಲಿ ಅವುಗಳು ಮನುಷ್ಯ ಸ್ನೇಹಿಯಾಗಿರುತ್ತವೆ. ಬೀದಿ ನಾಯಿಗಳನ್ನು ಸ್ವತಂತ್ರವಾಗಿ ಬದುಕಲು ಬಿಡಬೇಕು ಎಂದು ಪ್ರಾಣಿ ಸಂರಕ್ಷಕರಾದ ರಜನಿ ಶೆಟ್ಟಿ ಹೇಳಿದರು.

ಪ್ರಾಣಿಗಳ ದೌರ್ಜನ್ಯ ತಡೆ ಸಮಾಜದ ದಿನೇಶ್ ಪೈ, ಪಶು ಶಸ್ತ್ರ ಚಿಕಿತ್ಸಕರಾದ ಡಾ. ಯಶಸ್ವೀ ರಾವ್, ಪ್ರಾಣಿ ಸಂರಕ್ಷಕಿ ಡಾ. ಶ್ರುತಿ ರಾವ್, ಚಾರ್ಲ್ಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News