ಟೋಕಿಯೋದಲ್ಲಿ ಟೋರನ್ ಪ್ರೋಗ್ರಾಮಿಂಗ್ ಸ್ಪರ್ಧೆ: ಎನ್‌ಐಟಿಕೆಯ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮನ್ನಣೆ
ಮಂಗಳೂರು, ಡಿ.31: ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿಕೆ) ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗದ (ಇಸಿಇ) ಪದವಿಪೂರ್ವ ವಿದ್ಯಾರ್ಥಿಗಳ ತಂಡ ಜಪಾನ್‌ನ ಟೋಕಿಯೋದಲ್ಲಿ ನಡೆದ ಟ್ರೋನ್ ಪ್ರೋಗ್ರಾಮಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾಪ ನಡೆದು ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿದ್ದಾರೆ.
ವಿದ್ಯಾರ್ಥಿಗಳಾದ ಆಯುಷ್ ಶ್ರೀನಿವಾಸನ್, ಆದಿತ್ಯ ಎ. ಮತ್ತು ಅಶ್ರಿತ್ ಸಿಂಗಂಪಳ್ಳಿ ಅವರು ಐಐಟಿ ಹೈದರಾಬಾದ್‌ನ ಆದರ್ಶ್ ಎ ಅವರೊಂದಿಗೆ ಜಪಾನ್‌ನ ಟೋಕಿಯೋದಲ್ಲಿ ಡಿ.11ರಂದು ನಡೆದ ಟ್ರೋನ್ ಪ್ರೋಗ್ರಾಮಿಂಗ್ ಸ್ಪರ್ಧೆಯ ಆರ್‌ಟಿಒಎಸ್ ಎಪ್ಲಿಕೇಶನ್ ವಿಭಾಗದಲ್ಲಿ ಎರಡನೆ ಸ್ಥಾನ ಗಳಿಸಿದ್ದಾರೆ.
ಸ್ಪರ್ಧೆಯ ಬಗ್ಗೆ:
ಟ್ರೋನ್ ಪ್ರೋಗಾಮಿಂಗ್ ಸ್ಪರ್ಧೆಯು ಜಪಾನ್‌ನ ಟ್ರೋನ್ ಫೋರಂ ಆಯೋಜಿಸಿದ ಮತ್ತು ಐಇಇಇ ಗ್ರಾಹಕ ತಂತ್ರಜ್ಞಾನ ಸೊಸೈಟಿಯಿಂದ ಸಹ-ಪ್ರಾಯೋಜಿತ ಜಾಗತಿಕ ಸ್ಪರ್ಧೆಯಾಗಿದೆ. ಇದು ಉನ್ನತ-ಕಾರ್ಯಕ್ಷಮತೆಯ ರಿಯಲ್-ಟೈಮ್ ಆಪರೇಟಿಂಗ್ ಸಿಸ್ಟಮ್ಸ್ (ಆರ್‌ಟಿಒಎಸ್), ಎಂಬೆಡೆಡ್ ಕಂಪ್ಯೂಟಿಂಗ್ ಮತ್ತು ಎಡ್ಜ್ ಎಐ ಪರಿಹಾರಗಳ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತದೆ. ಪ್ರಮಾಣೀಕೃತ ಎಂಬೆಡೆಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಂಕೀರ್ಣ ಕಂಪ್ಯೂಟಿಂಗ್ ಸವಾಲುಗಳನ್ನು ಪರಿಹರಿಸಲು ವಿಶ್ವಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ಕೈಗಾರಿಕೆಗಳ ಉನ್ನತ ತಾಂತ್ರಿಕ ತಂಡಗಳನ್ನು ಸ್ಪರ್ಧೆಗೆ ಆಹ್ವಾನಿಸಲಾಗುತ್ತದೆ.
ವಿದ್ಯಾರ್ಥಿಗಳ ಈ ಸಾಧನೆಯು ಎನ್‌ಐಟಿಕೆ ಸುರತ್ಕಲ್‌ನ ನಾವೀನ್ಯತೆ ಮತ್ತು ಶ್ರೇಷ್ಠತೆಯ ಸಾಮರ್ಥ್ಯವನ್ನು ತೋರ್ಪಡಿಸಿದ್ದು, ವಿದ್ಯಾರ್ಥಿಗಳನ್ನು ಅಭಿನಂದಿಸುವುದಾಗಿ ಎನ್‌ಐಟಿಕೆ ಪ್ರಕಟನೆಯಲ್ಲಿ ತಿಳಿಸಿದೆ.