ಜ.2ರಂದು ಯುನಿವೆಫ್‌ನಿಂದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನ ಸಮಾರೋಪ
ಮಂಗಳೂರು, ಡಿ.31: ಯುನಿವೆಫ್ ಕರ್ನಾಟಕದಿಂದ ಸೆ. 19ರಿಂದ ಆರಂಭಿಸಲಾದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನ ಜ. 2ರಂದು ನಗರದ ಪುರಭವನದಲ್ಲಿ ಸಮಾರೋಪಗೊಳ್ಳಲಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅಭಿಯಾದ ಸಂಚಾಲಕ ಯು.ಕೆ. ಖಾಲಿದ್, ಸಂಜೆ 6.45ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದರು.
ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ ಎಂಬ ಕೇಂದ್ರೀಯ ವಿಷಯದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಚಿಕ್ಕಮಗಳೂರಿನ ವಿಶ್ವಧರ್ಮ ಪೀಠ ಜಯಬಸವಾನಂದ ತಪೋವನದ ಡಾ. ಜಯಬಸವಾನಂದ ಸ್ವಾಮೀಜಿ, ಸಿ.ಆರ್. ಐ. ಅಧ್ಯಕ್ಷ ಹಾಗೂ ಪ್ಯಾರಿಷ್ ಧರ್ಮಗುರು ರೆ. ಡಾ.ಡೊಮಿನಿಕ್ ವಾಸ್, ಮಾಜಿ ಸಚಿವ ಬಿ. ರಮಾನಾಥ ರೈ, ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಜೆಪ್ಪು ಸದ್ಭಾವನಾ ವೇದಿಕೆಯ ಅಧ್ಯಕ್ಷ ಹಾಗೂ ಯೋಗ ಗುರು ದಿವಾನ್ ಕೇಶವಭಟ್, ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಇನಾಸ್ ರಾಡ್ರಿಗಸ್, ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹೀಂ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಅಭಿಯಾನದ ಅಂಗವಾಗಿ ದ.ಕ. ಜಿಲ್ಲೆಯಲ್ಲಿ 14 ಕಾರ್ಯಕ್ರಮ ನಡೆಸಲಾಗಿದೆ. 20 ವರ್ಷಗಳಿಂದ ನಿರಂತರವಾಗಿ ಈ ಅಭಿಯಾನವನ್ನು ಯುನಿವೆಫ್‌ನಿಂದ ಸಂಘಟಿಸಲಾಗುತ್ತಿದೆ ಎಂದು ಯು.ಕೆ. ಖಾಲಿದ್ ತಿಳಿಸಿದರು.
ಗೋಷ್ಟಿಯಲ್ಲಿ ಅಭಿಯಾನದ ಸಹ ಸಂಚಾಲಕರಾದ ಮುಹಮ್ಮದ್ ಆಸಿಫ್, ಉಬೈದುಲ್ಲಾ ಬಂಟ್ವಾಳ, ಸದಸ್ಯರಾದ ಅಬ್ದುಲ್ ರಶೀದ್, ಸಯೀದ್ ಅಹ್ಮದ್, ಶೇಖ್ ಅಹ್ಮದ್ ಉಪಸ್ಥಿತರಿದ್ದರು.