ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ ವಾರ್ಷಿಕ ಮಹಾಸಭೆ
ಬಂಟ್ವಾಳ: ದೇಶದಲ್ಲಿಂದು ಮಾನವತಾವಾದ ಮತ್ತು ಮನುವಾದದ ಉತ್ಕಟ ಸಂಘರ್ಷ ನಡೆಯುತ್ತಿದೆ. ಮಾನವತಾ ವಾದ ಪ್ರಜಾಪ್ರಭುತ್ವ ಮತ್ತು ಸಂವಿಂಧಾನವನ್ನು ರಕ್ಷಿಸುತ್ತಿದ್ದರೆ, ಮನುವಾದ ಇವೆರಡನ್ನು ಧ್ವಂಸಗೊಳಿಸುತ್ತಿದೆ ಎಂದು ಮಾನವ ಬಂಧುತ್ವ ವೇದಿಕೆ ಮಂಗಳೂರು ವಿಭಾಗೀಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್ ಅಭಿಪ್ರಾಯಪಟ್ಟರು.
ಬಿಸಿ ರೋಡಿನಲ್ಲಿ ಮಂಗಳವಾರ ಜರುಗಿದ ಬಂಟ್ವಾಳ ‘ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ’ಯ 9ನೇ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಭಾರತದಲ್ಲಿ ಹುಟ್ಟಿದಷ್ಟು ದಾರ್ಶನಿಕರು, ಸಂತರು, ರಾಜನೀತಿಜ್ಞರು ಜಗತ್ತಿನ ಬೇರೆ ಯಾವುದೇ ದೇಶದಲ್ಲೂ ಹುಟ್ಟಿರಲಾ ರರು. ಬುದ್ಧ, ಬಸವ, ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಗಾಂಧಿ ಅಂಬೇಡ್ಕರ್ ಮುಂತಾದ ದಾರ್ಶನಿಕರು ಈ ನೆಲದಲ್ಲಿ ಮಾನವೀಯತೆಯನ್ನು ಬಿತ್ತಿ ಶಾಂತಿ ಸೌಹಾರ್ದದ ನಾಗರಿಕ ಸಮಾಜವನ್ನು ಕಟ್ಟಲು ಯತ್ತಿಸಿದ್ದಾರೆ. ಆದರೆ ಮತೀಯವಾದಿಗಳು ಇವರ ಚಿಂತನೆಗಳನ್ನು ನಾಶಗೊಳಿಸಿ ದ್ವೇಷ, ಹಿಂಸೆಗಳ ಸಮಾಜವನ್ನು ಕಟ್ಟಲು ಹೊರಟಿದ್ದಾರೆ ಎಂದು ಸತೀಶ್ ಕುಮಾರ್ ಹೇಳಿದರು.
ಸಮಿತಿಯ ಬಂಟ್ವಾಳ ತಾಲೂಕು ಅಧ್ಯಕ್ಷ ಮೋಹನ್ ಶೆಟ್ಟಿ ಪಂಜಿಕಲ್ಲು ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಐಟಿಯುಸಿ ಕಾರ್ಮಿಕ ಸಂಘಟನೆಯ ಮುಂದಾಳು ಬಿ.ಶೇಖರ್, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಭಾರತಿ ಪ್ರಶಾಂತ್, ಮಾನವ ಬಂಧುತ್ವ ವೇದಿಕೆ ಬಂಟ್ವಾಳ ತಾಲೂಕು ಪ್ರಧಾನ ಸಂಚಾಲಕ ಕೇಶವ ಪೂಜಾರಿ ಪಂಜಿಕಲ್ಲು ಮಾತನಾಡಿದರು.
2023-24 ನೇ ಸಾಲಿನ ಸಮಿತಿಯ ನೂತನ ಗೌರವ ಅಧ್ಯಕ್ಷರಾಗಿ ರಾಜಾ ಚಂಡ್ತಿಮಾರ್ ಹಾಗೂ ಸಯ್ಯದ್ ಅಬ್ದುಲ್ ಕರೀಂ, ಗೌರವ ಸಲಹೆಗಾರರಾಗಿ ಬಿ.ಎಂ ಪ್ರಭಾಕರ ದೈವಗುಡ್ಡೆ, ಅಧ್ಯಕ್ಷರಾಗಿ ಮೋಹನ್ ಶೆಟ್ಟಿ ಪಂಜಿಕಲ್ಲು, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್ ಬಂಟ್ವಾಳ್, ಕೋಶಾಧಿಕಾರಿಯಾಗಿ ಮ್ಯಾಕ್ಸಿಂ ಕುಕ್ಕಾಜೆ, ಸಂಘಟನಾ ಕಾರ್ಯ ದರ್ಶಿಯಾಗಿ ಎಂ.ಎಚ್.ಮುಸ್ತಫ, ಉಪಾಧ್ಯಕ್ಷರಾಗಿ ಸೀತರಾಮ ಶೆಟ್ಟಿ, ಲೋಕೇಶ್ ಸುವರ್ಣ, ಶ್ರೀನಿವಾಸ ಭಂಡಾರಿ, ಜೊತೆ ಕಾರ್ಯದರ್ಶಿಯಾಗಿ ಮ್ಯಾಥ್ಯೂ, ಪ್ರೇಮನಾಥ ಕೆ., ಶೇಖರ ಬೀಯಪಾದೆ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲ ಕರಾಗಿ ಉಮ್ಮರ್ ಕುಂಞಿ ಸಾಲೆತ್ತೂರು, ಮಹಿಳಾ ಘಟಕದ ಸಂಚಾಲಕರಾಗಿ ಭಾರತಿ ಪ್ರಶಾಂತ್ ಆಯ್ಕೆಗೊಂಡರು.