ಕೆಂಪುಕಲ್ಲು ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿಗೆ ಮನವಿ
ಮಂಗಳೂರು, ಆ.6: ದ.ಕ. ಜಿಲ್ಲೆಯಲ್ಲಿ ಕೆಂಪುಕಲ್ಲಿನ ಕೋರೆ ನಿಂತಿರುವುದರಿಂದ ಆಗಿರುವ ಸಮಸ್ಯೆಗಳ ಬಗ್ಗೆ ಮತ್ತು ಸೂಕ್ತ ಪರಿಹಾರ ಕಲ್ಪಿಸುವಂತೆ ನಿಯೋಗವೊಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಗೈದು ಮನವಿ ಮಾಡಿದೆ.
ದ.ಕ. ಜಿಲ್ಲಾ ಕೆಂಪುಕಲ್ಲು ಕೋರೆ ಮತ್ತು ಲಾರಿ ಮಾಲಕರ ಒಕ್ಕೂಟದ ನಿಯೋಗ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿ ಯಲ್ಲಿ ಕೆಂಪುಕಲ್ಲು ಕೋರೆಗಳು ನಿಂತ ಪರಿಣಾಮ ನಿರ್ಮಾಣ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿದೆ. ವ್ಯಾಪಾರಿಗಳು ಮತ್ತು ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಜಿಲ್ಲೆಯ ಆರ್ಥಿಕ ಚಲನವಲನ ನಿಂತಿದೆ. ಕಾರ್ಮಿಕರೂ ನಿರುದ್ಯೋಗಿಗಳಾಗಿದ್ದಾರೆ ಎಂದು ತಿಳಿಸಿದೆ.
ವಾರದೊಳಗೆ ಜಿಲ್ಲೆಯ ಮುಖಂಡರ ಬಳಿ ಚರ್ಚಿಸಿ ಪರಿಹಾರ ಕಲ್ಪಿಸುವೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾಗಿ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ರೈ ಪಜೀರ್ ತಿಳಿಸಿದ್ದಾರೆ.
ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದ ನಿಯೋಗದಲ್ಲಿ ಕಾಂಗ್ರೆಸ್ ಮುಖಂಡ ಪದ್ಮನಾಭ ಕೋಟ್ಯಾನ್, ಕೈಕಂಬ ವಲಯಾಧ್ಯಕ್ಷ ಧೀರಜ್ ಅಮೀನ್, ಕಾರ್ಯದರ್ಶಿ ಇಬ್ರಾಹಿಂ ಬಾಷ ಮತ್ತಿತರರಿದ್ದರು.