ಧರ್ಮಸ್ಥಳ ದೂರು | ಜಿಪಿಆರ್ ಸಲಕರಣೆಗಳ ಕೃತಕ ಅಭಾವ?: ಸುಜಾತಾ ಭಟ್ ಪರ ವಕೀಲರ ಗಂಭೀರ ಕಳವಳ
ಸುಜಾತಾ ಭಟ್
ಮಂಗಳೂರು, ಆ. 5: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಲಾಗಿದೆ ಎನ್ನಲಾದ ಪ್ರಕರಣದಲ್ಲಿ, ಶವಗಳ ಅವಶೇಷಗಳನ್ನು ಹೊರತೆಗೆಯುವ ಪ್ರಕ್ರಿಯೆಯಲ್ಲಿ ಬಳಸಬಹುದಾದ ಭೂಮಿಯ ಒಳಭಾಗವನ್ನು ಸಮೀಕ್ಷೆ ಮಾಡುವ ಉಪಕರಣ ‘ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್’ (ಜಿಪಿಆರ್)ನ ಕೃತಕ ಅಭಾವ ಉಂಟಾಗಿದೆ ಎಂದು 2003ರಲ್ಲಿ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ ಎನ್. ಮಂಗಳವಾರ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ದೂರು ಸಾಕ್ಷಿದಾರ ಗುರುತಿಸಿರುವ ಸಮಾಧಿ ಸ್ಥಳಗಳಲ್ಲಿ ಅವಶೇಷಗಳನ್ನು ಗುರುತಿಸುವಲ್ಲಿ SÏT ಗೆ ನೆರವಾಗಲು ಆಧುನಿಕ ಜಿಪಿಆರ್ ತಂತ್ರಜ್ಞಾನವನ್ನು ಬಳಸುವಂತೆ ಸುಜಾತಾ ಭಟ್ SIT ಅಧಿಕಾರಿಗಳಿಗೆ ಈಗಾಗಲೇ ಮನವಿ ಮಾಡಿದ್ದಾರೆ. ಸಮಗ್ರ ಹಾಗೂ ವೈಜ್ಞಾನಿಕ ತನಿಖೆ ನಡೆಸಲು ಈ ಸಲಕರಣೆಯು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
‘‘ಭಾರತದಲ್ಲಿ ಜಿಪಿಆರ್ ಸಲಕರಣೆಗಳ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಕೆಲವೇ ಕೆಲವು ಖಾಸಗಿ ಕಂಪೆನಿಗಳು ತೊಡಗಿವೆ. ಹಾಗಾಗಿ, ಮೊದಲೇ ಈ ಸಲಕರಣೆಗಳ ಪೂರೈಕೆ ಸೀಮಿತವಾಗಿದೆ. ಆದರೆ ಈಗ, ಲಭ್ಯವಿರುವ ಜಿಪಿಆರ್ ಸಲಕರಣೆಗಳನ್ನು ಅಜ್ಞಾತ ಹಾಗೂ ಸ್ಥಾಪಿತ ಹಿತಾಸಕ್ತಿಗಳು ಈಗಾಗಲೇ ಖರೀದಿಸಿವೆ ಮತ್ತು ಹೆಚ್ಚಿನ ಸಲಕರಣೆಗಳಿಗಾಗಿ ಬೇಡಿಕೆಗಳನ್ನು ಸಲ್ಲಿಸಿವೆ. ಆ ಮೂಲಕ ಜಿಪಿಆರ್ ಸಲಕರಣೆಗಳ ಪೂರೈಕೆಯಲ್ಲಿ ಕೃತಕ ಅಭಾವವನ್ನು ಸೃಷ್ಟಿಸಲಾಗಿದೆ. ಅದೂ ಅಲ್ಲದೆ, ಧರ್ಮಸ್ಥಳದಲ್ಲಿ ಪ್ರಸಕ್ತ ನಡೆಯುತ್ತಿರುವ ಶವಗಳ ಉತ್ಖನನ ಕಾರ್ಯಕ್ಕೆ ಈ ಉಪಕರಣಗಳನ್ನು ನೀಡದಂತೆ ಈ ಕಂಪೆನಿಗಳ ಮನವೊಲಿಸಲಾಗಿದೆ ಅಥವಾ ಬೆದರಿಕೆ ಹಾಕಲಾಗಿದೆ. ಈ ಬೆಳವಣಿಗೆಯು ಅತ್ಯಂತ ಅಸಹಜ ಮತ್ತು ಕಳವಳಕರವಾಗಿದೆ’’ ಎಂದು ವಕೀಲ ಮಂಜುನಾಥ್ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಧರ್ಮಸ್ಥಳದ ಸಾಮೂಹಿಕ ಸಮಾಧಿಗಳನ್ನು ಅಗೆಯುವ ಸಮಯದಲ್ಲೇ ಜಿಪಿಆರ್ ಉಪಕರಣಗಳ ಖರೀದಿಯಲ್ಲಿ ಅಥವಾ ಕಾದಿರಿಸುವಿಕೆಯಲ್ಲಿ ಅಸಹಜ ಮತ್ತು ಸಂಶಯಾಸ್ಪದ ಹೆಚ್ಚಳ ಆಗಿದೆಯೇ ಹಾಗೂ SIT ಧರ್ಮಸ್ಥಳದಲ್ಲಿ ನಡೆಸುತ್ತಿರುವ ತನಿಖೆಗೆ ಈ ಉಪಕರಣಗಳನ್ನು ನೀಡದಂತೆ ಅವುಗಳನ್ನು ಉತ್ಪಾದಿಸುವ ಕಂಪೆನಿಗಳ ಮೇಲೆ ಒತ್ತಡ ಹೇರಲಾಗಿದೆಯೇ ಹಾಗೂ ಬೆದರಿಕೆ ಅಥವಾ ಪ್ರಲೋಭನೆಗಳನ್ನು ಒಡ್ಡಲಾಗಿದೆಯೇ ಎನ್ನುವುದನ್ನು ಪತ್ತೆಹಚ್ಚುವಂತೆ ಅವರು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ಡಿಜಿಪಿ ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ SIT ಉತ್ತಮ ಕೆಲಸ ಮಾಡುತ್ತಿದೆ ಎಂದು ಮಂಜುನಾಥ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದರೆ, ಜಿಪಿಆರ್ ಉಪಕರಣಗಳು ಸಿಗದಂತೆ ಮಾಡುವ ಮೂಲಕ SIT ತನಿಖೆಗೆ ತಡೆಯೊಡ್ಡುವ ಅಥವಾ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಪ್ರಯತ್ನವು ಸಂತ್ರಸ್ತರಿಗೆ ಮಾಡುವ ಘೋರ ಅನ್ಯಾಯವಾಗಿದೆ ಮತ್ತು ಕಾನೂನಿನ ಆಡಳಿತಕ್ಕೆ ಹಾಕಿದ ಸವಾಲಾಗಿದೆ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.
‘‘ನಾಪತ್ತೆಯಾಗಿರುವ ವ್ಯಕ್ತಿಗಳ ಕುಟುಂಬಗಳು ಸುದೀರ್ಘ ಕಾಲದಿಂದ ಅಗಾಧ ಯಾತನೆಯಿಂದ ಬಳಲುತ್ತಿವೆ. ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಮಗ್ರ ತನಿಖೆ ನಡೆದು ಅಪರಾಧಿಗಳಿಗೆ ಶಿಕ್ಷೆಯಾದಾಗ ಮಾತ್ರ ಆ ಕುಟುಂಬಗಳಿಗೆ ಸ್ವಲ್ಪವಾದರೂ ನೆಮ್ಮದಿ ಸಿಗಲು ಸಾಧ್ಯ’’ ಎಂದು ಅವರು ತಿಳಿಸಿದ್ದಾರೆ.
‘‘ನಾಪತ್ತೆಯಾಗಿರುವ ಬಾಲಕಿಯರು, ಮಹಿಳೆಯರು ಮತ್ತು ಪುರುಷರ ಪ್ರಕರಣಗಳ ಹಿಂದಿನ ಸತ್ಯಾಸತ್ಯತೆಯನ್ನು ತಿಳಿಯುವ ಹಕ್ಕು ಕರ್ನಾಟಕ ಮತ್ತು ಭಾರತದ ಜನತೆಗಿದೆ. ನಾಪತ್ತೆಯಾಗಿರುವವರ ಅವಶೇಷಗಳನ್ನು ಪತ್ತೆಹಚ್ಚಿ ಅವರ ಕಟುಂಬಗಳಿಗೆ ಒಪ್ಪಿಸಲು ಹಾಗೂ ಅವರಿಗೆ ನ್ಯಾಯ ನೀಡಲು ಜಿಪಿಆರ್ ತಂತ್ರಜ್ಞಾನ ಮುಂತಾದ ವೈಜ್ಞಾನಿಕ ವಿಧಾನಗಳನ್ನು ಬಳಸುವುದು ಅಗತ್ಯವಾಗಿದೆ’’ ಎಂದು ಸುಜಾತಾ ಭಟ್ ಪರ ವಕೀಲರಾದ ಮಂಜುನಾಥ್ ಎನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.