B I T ವತಿಯಿಂದ ವಿದ್ಯಾರ್ಥಿಗಳೊಂದಿಗೆ ‘ಸಾಮಾನ್ಯ ಎಂಜಿನಿಯರ್ ಆಗಿ ಉಳಿಯಬೇಡಿ’ ಸಂವಾದ
ಮಂಗಳೂರು: ಸಿಇಎ-ಬಿಐಟಿ, ಸಿಎಸ್‍ಇ ವಿಭಾಗದ ಸಹಯೋಗದೊಂದಿಗೆ ಮಂಗಳೂರಿನ ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯ ತರಬೇತಿ ಮತ್ತು ನೇಮಕಾತಿ ವಿಭಾಗವು ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ವಿದ್ಯಾರ್ಥಿಗಳೊಂದಿಗೆ “ಸಾಮಾನ್ಯ ಎಂಜಿನಿಯರ್ ಆಗಿ ಉಳಿಯಬೇಡಿ” ಎಂಬ ಸಂವಾದ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಂಡಿತ್ತು.
ಪೇಸ್ ವಿಸ್ಡಮ್ ಸಲ್ಯೂಷನ್ಸ್ ಪ್ರೈ. ಲಿ.ನ ಡೆಲಿವರಿ ವ್ಯವಸ್ಥಾಪಕ ಮುಹಮ್ಮದ್ ಸಾಕಿಬ್ ಈ ಸಂವಾದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಡಾ. ಸಾಕಿಬ್ ವಿದ್ಯಾರ್ಥಿಗಳು ತಾಂತ್ರಿಕ ಕೌಶಲ್ಯ ಹಾಗು ಇತರ ಸಹಕಾರಿ ಕೌಶಲ್ಯಗಳನ್ನು ಬೆಳೆಸಿಕೊಂಡು ಅವರ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಪ್ರೋತ್ಸಾಹಿಸಿದರು ಹಾಗೂ ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳು ಶಿಸ್ತಿನಿಂದ ಇರಬೇಕೆ ಹೊರತು ಕೇವಲ ಪ್ರೇರೇಪಿತರಾಗಬಾರದು. ಪ್ರೇರೇಪಣೆ ಯಾವಾಗಲೂ ಅಲ್ಪಾವಧಿಯದಾಗಿರುತ್ತದೆ ಎಂದು ಡಾ. ಸಾಕಿಬ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸ್ಥಿರವಾಗಿ ಬೆಳೆಯಬೇಕಾದರೆ, ಅವರ ಮೂಲಭೂತ ವ್ಯಕ್ತಿತ್ವವು ಸದೃಢವಾಗಿರಬೇಕು. ಗುರಿ ಸ್ಪಷ್ಟವಾಗಿರಬೇಕು ಹಾಗೂ ಹಿನ್ನಡೆಯಿಂದ ಪಾಠ ಕಲಿಯುವಂತಿರಬೇಕು ಎಂದು ಅವರು ಸಲಹೆ ನೀಡಿದರು. ತಾವು ಸ್ಥಾಪಿಸಿರುವ ಜಂಪ್ ವೇರ್ ವೇದಿಕೆಯ ಕುರಿತು ಅವರು ಒಳನೋಟಗಳನ್ನು ಹಂಚಿಕೊಂಡರು.
ಸಿಇಎ ಬಿಐಟಿ ಹಮ್ಮಿಕೊಂಡಿದ್ದ ಹಲವಾರು ತಾಂತ್ರಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಎಸ್.ಐ.ಮಂಜುರ್ ಬಾಷಾ, ಬಿಐಇಎಸ್ ನ ಪ್ರಾಂಶುಪಾಲ ಡಾ. ಅಝೀಝ್ ಮುಸ್ತಫಾ, ಇಸಿಇ ವಿಭಾಗ ಮುಖ್ಯಸ್ಥ ಡಾ.ಅಬ್ದುಲ್ಲಾ ಗುಬ್ಬಿ, ಸಿಎಸ್ಇ ವಿಭಾಗದ ಮುಖ್ಯಸ್ಥ ಪ್ರೊ. ಮುಹಮ್ಮದ್ ಸಿನನ್, ಎಐ ಮತ್ತು ಡಿಎಸ್ ವಿಭಾಗದ ಸಮನ್ವಯಾಧಿಕಾರಿ ಪ್ರೊ. ಸಫ್ರಾ ಉಪಸ್ಥಿತರಿದ್ದರು.
ಸಿಎಸ್ಇಯ ಮೂರನೆ ಸೆಮಿಸ್ಟರ್ ವಿದ್ಯಾರ್ಥಿನಿ ಅಫೀಫಾ, ನೇಮಕಾತಿ ವ್ಯವಸ್ಥಾಪಕಿ ಪ್ರೊ. ಅಶ್ವಿನಿ ಸಭಿಕರನ್ನು ಸ್ವಾಗತಿಸಿದರು. ಸಿಇಎ ಬಿಐಟಿಯ ಸಿಬ್ಬಂದಿ ಸಮನ್ವಯಾಧಿಕಾರಿ ಪ್ರೊ. ಉಮೈರಾ ವಂದಿಸಿದರು.