×
Ad

ಆ. 27 ರಿಂದ ಬಂಟ್ವಾಳ ಜಕ್ರಿಬೆಟ್ಟು ಸಾರ್ವಜನಿಕ ಗಣೇಶೋತ್ಸವ: ರಮಾನಾಥ ರೈ

Update: 2025-08-25 22:23 IST

ಬಂಟ್ವಾಳ : ಸಾಮರಸ್ಯದ ಗಣೇಶೋತ್ಸವ ಎಂದೇ ಪ್ರಸಿದ್ಧಿ ಪಡೆದಿರುವ ಬಂಟ್ವಾಳ ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿಯ ವತಿಯಿಂದ ನಡೆಯುವ 22 ನೇ ವರ್ಷದ ಶ್ರೀ ಗಣೇಶೋತ್ಸವವು ಆ. 27 ರಿಂದ 31ರ ವರೆಗೆ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಬಿ.ಸಿ.ರೋಡಿನಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಲ್ಲಿ ಮಾತನಾಡಿದ ಅವರು ಸರ್ವ ಜಾತಿ, ಧರ್ಮದವರು ಕೂಡ ಜಕ್ರಿಬೆಟ್ಟು ಗಣೇಶೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಪ್ರತಿವರ್ಷವೂ ಅದ್ದೂರಿಯಾಗಿ ನಡೆಯುತ್ತದೆ. ಸರಕಾರದ ಸುತ್ತೋಲೆಗಳಿಗೆ ಗೌರವ ಕೊಟ್ಟು ಈ ಬಾರಿಯ ಉತ್ಸವ ನಡೆಸಲು ಸಿದ್ಧರಾಗಿದ್ದೇವೆ. 5 ದಿನಗಳ ಉತ್ಸವದಲ್ಲಿ ಪ್ರತಿದಿನ ಬೆಳಗ್ಗೆ ಭಜನೆ, ಧಾರ್ಮಿಕ ಕಾರ್ಯ, ಮಧ್ಯಾಹ್ನ ಹಾಗೂ ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಪ್ರತಿ ದಿನದ ಧಾರ್ಮಿಕ ಸಭೆಯಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಕನ್ಯಾಡಿ ಶ್ರೀ 1008 ಮಹಾ ಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಬಾರ್ಕೂರು ಶ್ರೀ ವಿದ್ಯಾವಾಚಸ್ಪತಿ ಡಾ| ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಆಶೀರ್ವಚನ ಮಾಡಲಿದ್ದಾರೆ.

ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಚಿವ ಅಭಯಚಂದ್ರ ಜೈನ್ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆ. 27 ರಂದು ಕಾವಳಕಟ್ಟೆ ನಾಟ್ಯಲಹರಿ ನೃತ್ಯ ತಂಡದಿಂದ ನೃತ್ಯ ಸಿಂಚನ, ಎಕ್ಸ್ಟ್ರೀಮ್ ಡ್ಯಾನ್ಸ್ ತಂಡದಿಂದ ನೃತ್ಯ-ಗಾನ ಸಂಭ್ರಮ, ಆ. 28 ರಂದು ಅಳಿಕೆ ಎರುಂಬು ದಿವ್ಯಜ್ಯೋತಿ ಕಲಾವಿದರಿಂದ "ಮದಿಮೆದ ಇಲ್ಲಡ್" ತುಳು ನಾಟಕ ಪ್ರದರ್ಶನ, 29 ರಂದು ಅಮ್ಮ ಕಲಾವಿದೆರ್ ಕುಡ್ಲ ಇವರಿಂದ "ಆನ್‌ಮಗೆ" ತುಳುನಾಟಕ ಪ್ರದರ್ಶನ, 30 ರಂದು ಮಧ್ಯಾಹ್ನ 2 ಕ್ಕೆ ರಾವಣ ವಧೆ ತಾಳಮದ್ದಳೆ, ರಾತ್ರಿ 7.30 ರಿಂದ ಲಕುಮಿ ಕಲಾವಿದರಿಂದ "ಆಂಟೀ ಅಂಕಲ್" ತುಳು ನಾಟಕ ಪ್ರದರ್ಶನ, 31ರಂದು ಮಧ್ಯಾಹ್ನ 2 ಕ್ಕೆ ಮಾಳಕೋಡ್ ಯಕ್ಷಪಲ್ಲವಿ ಟ್ರಸ್ಟ್ ಯಕ್ಷಗಾನ ಮಂಡಳಿಯವರಿಂದ ಮಹೇಂದ್ರ ಶಪಥ ಯಕ್ಷಗಾನ ಪ್ರದರ್ಶನ, ಸಂಜೆ 5 ಕ್ಕೆ ವಿಸರ್ಜನಾ ಪೂಜೆಯ ಬಳಿಕ ಶೋಭಾಯಾತ್ರೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ್ ಜೈನ್, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಂಪತ್‌ ಕುಮಾರ್ ಶೆಟ್ಟಿ, ರಾಜೀವ ಶೆಟ್ಟಿ ಎಡ್ತೂರು, ಮಹಾಬಲ ಬಂಗೇರ, ಬೇಬಿ ಕುಂದರ್, ಸುದೀಪ್‌ಕುಮಾರ್ ಶೆಟ್ಟಿ, ಪಿ.ಪ್ರವೀಣ್ ಕಿಣಿ, ಬಾಲಕೃಷ್ಣ ಆರ್.ಅಂಚನ್, ಚಂದ್ರಶೇಖರ ಭಂಡಾರಿ, ಜಯಂತಿ ವಿ.ಪೂಜಾರಿ, ದೇವಪ್ಪ ಕುಲಾಲ್, ಅಶೋಕ್ ಭಂಡಾರಿಬೆಟ್ಟು, ವೆಂಕಪ್ಪ ಪೂಜಾರಿ, ಮೋಹನ್ ಚಂಡ್ತಿಮಾರ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News