ಬೆಳ್ತಂಗಡಿ | ಎಸ್ ಐ ಟಿ ಪೊಲೀಸ್ ಠಾಣೆಗೆ ದೂರುದಾರ ಜಯಂತ್ ಟಿ. ಭೇಟಿ
ಬೆಳ್ತಂಗಡಿ ಎಸ್‌ಐಟಿ ಕಚೇರಿಯನ್ನು ಎಸ್‌ಐಟಿ ಪೊಲೀಸ್ ಠಾಣೆಯಾಗಿ ಬದಲಾಯಿಸಲು ಒತ್ತಾಯ
ಬೆಳ್ತಂಗಡಿ: ಎಸ್ ಐ ಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮದ ಬೊಳಿಯಾರ್ ಗೋಂಕ್ರತಾರ್ ಪ್ರದೇಶದಲ್ಲಿ ಸ್ಥಳ ಮಹಜರು ಪ್ರಕ್ರಿಯೆ ನಡೆಸುತ್ತಿರುವ ಮಧ್ಯೆಯೇ ಬೆಳ್ತಂಗಡಿ ಇಚಿಲಂಪಾಡಿ ನಿವಾಸಿ ಜಯಂತ್ ಟಿ. ಇದೀಗ ಬೆಳ್ತಂಗಡಿ ಎಸ್ ಐ ಟಿ ಕಚೇರಿಗೆ ಆಗಮಿಸಿದ್ದಾರೆ.
ಬೆಳ್ತಂಗಡಿ ಇಚಿಲಂಪಾಡಿ ನಿವಾಸಿ ಜಯಂತ್ ಎಂಬವರು ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ ತಾನು ಯುವತಿಯ ಮೃತದೇಹ ನೋಡಿರುವುದಾಗಿ ದೂರು ದಾಖಲಿಸಿದ್ದರು.
ದೂರಿನ ಹಿನ್ನೆಲೆ ಜಯಂತ್ ಟಿ. ಅವರನ್ನು ಕಚೇರಿಗೆ ಆಹ್ವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದು, ಅಧಿಕಾರಿಗಳು ಮಾಹಿತಿ ಕಲೆಹಾಕುವ ಸಾಧ್ಯತೆಯಿದೆ. ಜಯಂತ್ ಟಿ. ಅವರು ಎಸ್ ಐ ಟಿ ಬೆಳ್ತಂಗಡಿ ಅವರ ಸಲಹೆಯಂತೆ ಆ.4ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬೆಳ್ತಂಗಡಿಯ ಎಸ್‌ಐಟಿ ಕಚೇರಿಯನ್ನು ಎಸ್‌ಐಟಿ ಪೊಲೀಸ್ ಠಾಣೆಯಾಗಿ ಬದಲಾಯಿಸಲು ಡಿಜಿ, ಐಜಿಪಿ ಡಾ.ಎಂ.ಎ.ಸಲೀಂ ಆದೇಶಿದ್ದಾರೆ ಎನ್ನಲಾಗಿದೆ.
ಇನ್ನು ಮುಂದೆ ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ದೂರುಗಳಿದ್ದರೂ, ಬೆಳ್ತಂಗಡಿ ಎಸ್‌ಐಟಿ ಪೊಲೀಸ್ ಠಾಣೆಯಲ್ಲಿಯೇ ದಾಖಲು ಮಾಡಲು ಅವಕಾಶ ನೀಡುವ ಉದ್ದೇಶದಿಂದ ಹೀಗೆ ಬದಲಾವಣೆ ಮಾಡಲಾಗಿದೆ.