ಬೆಳ್ತಂಗಡಿ | ಸರಕಾರಿ ಶಾಲಾ ಕಾರ್ಯಕ್ರಮಕ್ಕೆ ಶಿಕ್ಷಕ ಅರುಣ್ ಉಳ್ಳಾಲರ ಆಹ್ವಾನಕ್ಕೆ ಪೋಷಕರ ವಿರೋಧ: ಕಾರ್ಯಕ್ರಮವೇ ರದ್ದು!
ವಿವಾದಕ್ಕೆ ಕಾರಣವಾದ ಕಾರ್ಯಕ್ರಮದ ಆನ್ ಲೈನ್ ಆಹ್ವಾನ ಪತ್ರಿಕೆ
ಬೆಳ್ತಂಗಡಿ, ಫೆ.6: ಸಾರ್ವಜನಿಕ ಸಭೆಯಲ್ಲಿ ಕೋಮು ದ್ವೇಷದ ಭಾಷಣ ಮಾಡಿರುವ ಆರೋಪ ಹೊಂದಿರುವ ಶಿಕ್ಷಕ ಡಾ.ಅರುಣ್ ಉಳ್ಳಾಲ್ ಎಂಬವರನ್ನು ಸರಕಾರಿ ವಸತಿ ಶಾಲೆಯೊಂದು ಸಂವಾದ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಿ ಪೇಚಿಗೆ ಸಿಲುಕಿ, ಕೊನೆ ಕ್ಷಣದಲ್ಲಿ ಕಾರ್ಯಕ್ರಮವನ್ನೇ ರದ್ದುಗೊಳಿಸಿದ ಘಟನೆ ಗುರುವಾರ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಹೊಸಂಗಡಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೊಳಪಟ್ಟ ಇಂದಿರಾ ಗಾಂಧಿ ಸರಕಾರಿ ವಸತಿ ಶಾಲೆಯಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗಾಗಿ ಗುರುವಾರ(ಫೆ.6) ಬೆಳಗ್ಗೆ ಸಂವಾದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಖಾಸಗಿ ವಿದ್ಯಾಸಂಸ್ಥೆಯೊಂದರ ಶಿಕ್ಷಕ ಡಾ.ಅರುಣ್ ಉಳ್ಳಾಲ್ ಎಂಬವರನ್ನು ಕರೆಯಲಾಗಿತ್ತು.
ಆದರೆ ಕೋಮು ವೈಷಮ್ಯ ಬಿತ್ತುವ ಭಾಷಣ ಮಾಡಿರುವ ಆರೋಪ ಎದುರಿಸುತ್ತಿರುವ ಅರುಣ್ ಉಳ್ಳಾಲ್ ರನ್ನು ಮಕ್ಕಳಿಗೆ ಉಪದೇಶ ನೀಡಲು ಆಹ್ವಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳ ಪೋಷಕರು, ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಗುರುವಾರ ಬೆಳಗ್ಗೆ ಮೌಖಿಕವಾಗಿ ದೂರು ನೀಡಿದ್ದರು, ದ್ವೇಷ ಭಾಷಣ ಮಾಡುವವರನ್ನು ಶಾಲೆಗೆ ಉಪನ್ಯಾಸಕ್ಕೆ ಆಹ್ವಾನಿಸಿದ ಶಾಲೆಯ ಪ್ರಾಂಶುಪಾಲ ಶ್ರೀಧರ ಶೆಟ್ಟಿಯವರನ್ನು ಕೂಡ ವಿದ್ಯಾರ್ಥಿಗಳ ಪೋಷಕರು ತರಾಟೆಗೆ ತೆಗೆದುಕೊಂಡಿದ್ದರು.
ಪೋಷಕರ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆರಂಭಗೊಳ್ಳುವುದಕ್ಕಿಂತ ಅರ್ಧ ತಾಸು ಮೊದಲು ಸಂವಾದ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿ ಇಲಾಖಾಧಿಕಾರಿಗಳು ಹಾಗೂ ಶಾಲಾ ಪ್ರಾಂಶುಪಾಲರು ಘೋಷಿಸಿ ವಿವಾದವನ್ನು ಸುಖಾಂತ್ಯಗೊಳಿಸಿದರು.
ಅರುಣ್ ಉಳ್ಳಾಲ್ ಇತ್ತೀಚೆಗೆ ಉಳ್ಳಾಲ ತಾಲೂಕಿನ ತಲಪಾಡಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ 'ಕ್ರೈಸ್ತರು ನಡೆಸುವ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬಾರದು, ಕ್ರೈಸ್ತರು ನಡೆಸುವ ಮದುವೆ ಸಭಾಂಗಣದಲ್ಲಿ ಮದುವೆಯಾಗಬಾರದು' ಎಂಬುದಾಗಿ ಮಾಡಿದ್ದರೆನ್ನಲಾದ ಭಾಷಣದ ವೀಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಸಂದರ್ಭದಲ್ಲಿ ಸೈಬರ್ ಕ್ರೈಮ್ ಠಾಣಾ ಪೊಲೀಸರು ಅರುಣ್ ಉಳ್ಳಾಲ್ ವಿರುದ್ಧ ಕೋಮು ವೈಷಮ್ಯ ಬಿತ್ತುವ ಹಾಗೂ ಕೋಮು ಪ್ರಚೋದನೆ ಮಾಡಿದ ಸೆಕ್ಷನ್ ಅನ್ವಯ ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದರು.