×
Ad

ಬೆಳ್ತಂಗಡಿ | ಹೊಸ ವರ್ಷಾಚರಣೆ ಪಾರ್ಟಿಯಲ್ಲಿ ಗಲಾಟೆ: ಓರ್ವನ ಮೂಗು ಕಚ್ಚಿ ತುಂಡರಿಸಿದ ಕಿಡಿಗೇಡಿ!

Update: 2024-01-01 15:39 IST

ಬೆಳ್ತಂಗಡಿ, ಜ,1: ಹೊಸ ವರ್ಷದ ಪಾರ್ಟಿಯಲ್ಲಿ ಯುವಕರ ನಡುವೆ ಗಲಾಟೆಯಾಗಿ ಯುವಕನೊಬ್ಬನ ಮೂಗನ್ನು ಇನ್ನೋರ್ವ ಯುವಕ ಕಚ್ಚಿ ತುಂಡರಿಸಿದ ಘಟನೆ ಪಿಲ್ಯದಲ್ಲಿ ರವಿವಾರ ರಾತ್ರಿ ನಡೆದಿದೆ.

ಪಿಲ್ಯ ಗ್ರಾಮದ ಉಲ್ಪೆ ನಿವಾಸಿ ದೀಕ್ಷಿತ್ (28) ಎಂಬವರು ಮೂಗು ತುಂಡರಿಸಲ್ಪಟ್ಟಿದೆ. ಕಚ್ಚಿ ಮೂಗು ತುಂಡರಿಸಿದ ಯುವಕನನ್ನು ರಾಕೇಶ್ ಎಂದು ಗುರುತಿಸಲಾಗಿದೆ. ಮೂಲತಃ ಮೂಡಿಗೆರೆ ತಾಲೂಕಿನವನಾಗಿರುವ ರಾಕೇಶ್, ಪ್ರಸಕ್ತ ಪಿಲ್ಯ ಗ್ರಾಮದ ಸಂಬಂಧಿಕರ ಮನೆಯಲ್ಲಿ ವಾಸವಿದ್ದು, ಸ್ಥಳೀಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ.

ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ಸಂದರ್ಭ ಮದ್ಯ ಸೇವಿಸಿ ಕ್ಷುಲ್ಲಕ ವಿಚಾರದಲ್ಲಿ ಯುವಕರ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ದೀಕ್ಷಿತ್ ಮೂಗನ್ನು ರಾಕೇಶ್ ಬಲವಾಗಿ ಕಚ್ಚಿ ತುಂಡರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಿಂದ ಗಂಭೀರ ಗಾಯಗೊಂಡ ದೀಕ್ಷಿತ್ ರಿಗೆ ಗುರುವಾಯನಕೆರೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News