×
Ad

ಬೆಳ್ತಂಗಡಿ : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ 40 ಕೋಟಿ ರೂ. ಹಗರಣ; ಪ್ರಕರಣ ದಾಖಲು

Update: 2025-05-24 13:54 IST

ಬೆಳ್ತಂಗಡಿ : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ರಿ) ಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಸುಮಾರು 40 ಕೋಟಿ ರೂಪಾಯಿ ಹಣವನ್ನು ವಾಪಸ್ ನೀಡದೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು. ಈ ಬಗ್ಗೆ 2021 ರಿಂದ 2024 ರವರೆಗೆ ಸೊಸೈಟಿಯಲ್ಲಿ ಜವಬ್ದಾರಿ ವಹಿಸಿಕೊಂಡಿದ್ದ 14 ಜನರ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಬೆಳ್ತಂಗಡಿ ನಗರದ ಜ್ಯೂನಿಯರ್ ಕಾಲೇಜ್ ರಸ್ತೆಯಲ್ಲಿರುವ ರಾಮನಗರದ ವಿ.ಆರ್.ನಾಯಕ್ ಕಾಂಪೌಂಡ್ ನಲ್ಲಿ ಸುಮಾರು 25 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಶ್ರೀ ರಾಮ ಕ್ರೆಡಿಟ್‌ ಕೋ ಆಪರೇಟಿವ್ ಸೊಸೈಟಿ(ರಿ) ನಲ್ಲಿ ಆಡಳಿತ ಮಂಡಳಿಯವರು ಗ್ರಾಹಕರಿಗೆ ಸೇರಿದ ಠೇವಣಿ ಇಟ್ಟಿದ್ದ ಕೋಟ್ಯಾಂತರ ರೂಪಾಯಿ ಹಣ ವಾಪಸ್ ಗ್ರಾಹಕರಿಗೆ ನೀಡದೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕಳೆದ ಒಂದು ವರ್ಷದಿಂದ ಗ್ರಾಹಕರು ಒಟ್ಟಾಗಿ ಸೇರಿ ದಾಖಲೆಗಳನ್ನು ತೆಗೆದು ಡಿಸಿ, ಎಸ್ಪಿ, ಸಹಕಾರ ಸಂಘ, ಗ್ರಾಹಕರ ವೇದಿಕೆ ಸೇರಿದಂತೆ ಎಲ್ಲಾ ಕಡೆ ದೂರು ನೀಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಕೆ.ಪಿ.ಐ.ಡಿ ಅಧಿನಿಯಮದ ಕಲಂ 3ರಂತೆ ದೂರು ನೀಡಲಾಗಿತ್ತು. ಅದಾದ ಬಳಿಕ ಇದೀಗ ಠೇವಣಿ ಇರಿಸಿ ಹಣ ಕಳೆದುಕೊಂಡ ಬೆಳ್ತಂಗಡಿ ನಿವಾಸಿ ದಯಾನಂದ ನಾಯಕ್ ಹಾಗು ಇತರ 12 ಮಂದಿ ಗ್ರಾಹಕರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮೇ.23 ರಂದು KARNATAKA PROTECTION OF INTEREST DEPOSITIONS EXORBITANT ACT 2004 (u/s -9) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

2021 ರಿಂದ 2024 ರ ವರೆಗೆ ಬ್ಯಾಂಕ್ ನಲ್ಲಿ ಕರ್ತವ್ಯದಲ್ಲಿದ್ದ ಬ್ಯಾಂಕ್ ಸಿಇಒ ಚಂದ್ರಕಾಂತ್, ಅಧ್ಯಕ್ಷ ಪ್ರಭಾಕರ ಸಿ.ಹೆಚ್, ಉಪಾಧ್ಯಕ್ಷ ಸದಾನಂದ.ಎಮ್ ಉಜಿರೆ, ನಿರ್ದೇಶಕ ರುಗಳಾದ ವಿಶ್ವನಾಥ.ಆರ್.ನಾಯಕ್, ಪ್ರಮೋದ್. ಆರ್‌.ನಾಯಕ್, ವಿಶ್ವನಾಥ, ಜಗನ್ನಾಥ.ಪಿ, ರತ್ನಾಕರ, ಸುಮ ದಿನೇಶ್ ಉಜಿರೆ, ನಯನ ಶಿವಪ್ರಸಾದ್, ಮೋಹನ್ ದಾಸ್.ಕೆ, ಕಿಶೋರ್ ಕುಮಾರ್ ಲಾಯಿಲ, ಬ್ಯಾಂಕ್ ಸಿಬ್ಬಂದಿ ಸರಿತಾ.ಎಸ್ ಮತ್ತು ವಿನೋದ್ ಕುಮಾರ್.ಸಿ.ಹೆಚ್ ಸೇರಿ ಒಟ್ಟು 14 ಮಂದಿಯ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಯಾನಂದ ನಾಯಕ್, ನಿಧೀಶ್‌.ಡಿ. ನಾಯಕ್, ಶ್ರದ್ಧಾ.ಬಿ ಮಾಲಿನಿ.ಟಿ.ರಾವ್, ತುಕರಾಮ್ ರಾವ್, ಅಕ್ಷಯಾ.ಟಿ.ರಾವ್, ಅಕ್ಷತಾ ರಾವ್, ಚೈತ್ರಾ ಭಟ್, ಮೈತ್ರಿ ಭಟ್, ಸ್ವಾತಿ ಭಟ್, ನಂದಕುಮಾರ್, ಬಿ.ಗಣೇಶ್ ಭಟ್, ವಿದ್ಯಾ ಭಟ್ ಸೇರಿ 13 ಮಂದಿ ದೂರು ನೀಡಿದ್ದಾರೆ. ತಾವು ಬ್ಯಾಂಕಿ‌ಲ್ಲಿ ವಿವಿಧ ಸಂದರ್ಭದಲ್ಲಿ ಠೇವಣೆ ಇರಿಸಿದ್ದ ರೂ 4 ಕೋಟಿಗೂ ಅಧಿಕ ಮೊತ್ತವನ್ನು ಠೇವಣೆ ಅವಧಿ ಮುಗಿದು ಮರಳಿ ಕೇಳಿದಾಗ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷರು ಹಾಗು ನಿರ್ದೆಶಕರುಗಳು ಹಣವನ್ನು ಹಿಂದಕ್ಕೆ ನೀಡಿರುವುದಿಲ್ಲ ಹಾಗೂ ಈ ಬಗ್ಗೆ ಮತ್ತೆ ವಿಚಾರಿಸಿದಾಗ ಇವರು ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

ಈ ಬಗ್ಗೆ ಸಹಕಾರಿ ಸಂಘಗಳ ನಿಬಂಧಕರು ಮಂಗಳೂರು ಇವರ ನಿರ್ದೇಶನದಂತೆ ಸಂಸ್ಥೆಯ ಹಣಕಾಸು ವ್ಯವಹಾರಗಳ ಬಗ್ಗೆ ಲೆಕ್ಕ ಪರಿಶೋಧನೆಯನ್ನು ನಡೆಸಿದ್ದು, ಈ ವೇಳೆ ಸುಳ್ಳು ಸಾಲದ ಖಾತೆಗಳನ್ನು ತೆರೆದು ಕೋಟ್ಯಾಂತರ ರುಪಾಯಿ ಸಾಲ ಪಡೆದಿರುವುದು ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯವರಿಗೆ ಕೆ.ಪಿ.ಐ.ಡಿ ಅಧಿನಿಯಮದ ಕಲಂ 3ರಂತೆ ದೂರು ನೀಡಲಾಗಿದೆ. ಇದಾದ ಬಳಿಕ ಇದೀಗ ಪೊಲೀಸರಿಗೂ ದೂರು ನೀಡಲಾಗಿದ್ದು, ತಾವು ವಂಚನೆಗೆ ಒಳಗಾಗಿರುವಂತೆ ಇನ್ನೂ ಹಲವರು ಇದೇ ಸಂಸ್ಥೆಯಲ್ಲಿ ಹಣವನ್ನು ಠೇವಣಿಯಾಗಿ ಇರಿಸಿದ್ದು ಒಟ್ಟು ಸುಮಾರು 40ಕೋಟಿ ರುಪಾಯಿ ಹಣವನ್ನು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು, ಅದರಂತೆ ಎಫ್.ಐ.ಆರ್ ದಾಖಲಿಸಲಾಗಿದೆ.

 

ಸುಮಾರು 200 ಕ್ಕೂ ಮಿಕ್ಕಿ ಗ್ರಾಹಕರಿಗೆ ಈ ಸೊಸೈಟಿಯಿಂದ ವಂಚನೆಯಾಗಿದ್ದು ಕೆಲವರು ದೂರು ಕೊಡಲು ಮುಂದೆ ಬರುತ್ತಿಲ್ಲ ಈಗ ನಾವು 13 ಮಂದಿ ನೊಂದವರು ಮುಂದೆ ಬಂದು ದೂರು ನೀಡಿದ್ದೇವೆ. ತಾಲೂಕಿನ ಬಡವರು, ಸಾಮಾನ್ಯ ಜನರು ಇಲ್ಲಿ ಹಣ ಠೇವಣೆ ಇಟ್ಟಿದ್ದಾರೆ. ನೂರಾರು ಜನರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕು.

ದಯಾನಂದ ನಾಯಕ್, ದೂರುದಾರರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News