×
Ad

ಬೆಳ್ತಂಗಡಿ | ಧರ್ಮಸ್ಥಳದಲ್ಲಿ ಯೂಟ್ಯೂಬರ್ ಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ

Update: 2025-08-08 20:09 IST

ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಯೂಟ್ಯೂಬರ್ ಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಸಮಿತಿ ವತಿಯಿಂದ ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿಯವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನಾ ಸಭೆ ನಡೆಯಿತು.

ಸಭೆಯನ್ನು ಉದ್ದೇಶಿಸಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮಾತನಾಡಿ, 'ಧರ್ಮಸ್ಥಳದಲ್ಲಿ ಯುಟ್ಯೂಬರ್ ಗಳ ಮೇಲೆ ನಡೆದ ಹಲ್ಲೆ ಪೂರ್ವಯೋಜಿತ ಮತ್ತು ಸಾಕ್ಷಿ ದೂರು ಪ್ರಕರಣ ದಿಕ್ಕು ತಪ್ಪಿಸಲು ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿದೆ. ಅನ್ಯಾಯ ಕಂಡಲ್ಲಿ ಅದನ್ನು ಪ್ರಶ್ನೆ ಮಾಡುವುದು ನಮ್ಮ ಪಕ್ಷದ ಮೂಲ ಸಿದ್ಧಾಂತ. ಪ್ರಶ್ನೆ ಮಾಡುವುದನ್ನು ಮಾಡಿಯೇ ತೀರುತ್ತೇವೆ. ಅದು ಎಷ್ಟೇ ಬಲಾಡ್ಯರಾದರೂ ಸರಿ, ಹತ್ಯೆಗಳ ಬಗ್ಗೆ ಮೌನಕ್ಕೆ ಜಾರಿದ್ದ ಬಿಜೆಪಿ ಮುಖಂಡರು ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ನಮ್ಮ ಹೋರಾಟವನ್ನು ಅಣಕಿಸಲು ಪ್ರಯತ್ನಿಸುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ಸಲೀಂ ಗುರುವಾಯನಕೆರೆ ಮಾತನಾಡಿ, 'ಸತ್ಯವನ್ನು ತೋರಿಸುತ್ತಿದ್ದ ಯೂಟ್ಯೂಬರ್ ಗಳ ಮೇಲೆ ನಡೆದ ಹಲ್ಲೆ ಖಂಡನೀಯ. ಬಿಜೆಪಿ ಈ ಪ್ರಕರಣವನ್ನು ಹಿಂದೂ ಮುಸ್ಲಿಂ ಮಾಡುವುದರಲ್ಲಿ ತಲ್ಲೀನವಾಗಿದೆ ಎಂದು ಹೇಳಿದರು.

ಎಸ್ಡಿಪಿಐ ಬೆಳ್ತಂಗಡಿ ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಹನೀಫ್ ಪುಂಜಾಲಕಟ್ಟೆ , ವಿಧಾನಸಭಾ ಉಪಾಧ್ಯಕ್ಷ ನಿಸಾರ್ ಕುದ್ರಡ್ಕ, ಪ್ರಧಾನ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ ಇದ್ದರು.

ಅಶ್ರಫ್ ಚಾರ್ಮಾಡಿ ತಂಡ ಹೋರಾಟದ ಘೋಷಣೆ ಮೊಳಗಿಸಿದರೆ, ರವೂಫ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News