ಬೆಳ್ತಂಗಡಿ| ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೆ ಮಾಡಿದ ಆರೋಪ: ವಿಚಾರಣೆಗೆ ಒಳಗಾದ ಯೂಟ್ಯೂಬರ್ ಸಮೀರ್ ಎಂಡಿ
ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೆ ಮಾಡಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ದಿನವಿಡೀ ಸಮೀರ್ ಎಂ ಡಿ ಅವರನ್ನು ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಯಿತು.
ಸಮೀರ್ ಎಂಡಿ ಮಧ್ಯಾಹ್ನ12 ಗಂಟೆಯ ಸುಮಾರಿಗೆ ತನ್ನ ವಕೀಲರುಗಳೊಂದಿಗೆ ಬೆಳ್ತಂಗಡಿ ಠಾಣೆಗೆ ಆಗಮಿಸಿದ್ದರು. ರಾತ್ರಿ ಹತ್ತು ಗಂಟೆಯ ಸುಮಾರಿಗೆ ವಿಚಾರಣೆ ಪೂರ್ಣಗೊಳಿಸಿ ಹಿಂತಿರುಗಿದರು. ಆರಂಭದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿ ಅವರ ಮುಂದೆ ಹಾಜರಾಗಿ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಬಗ್ಗೆ ವಿಚಾರಣೆ ಎದುರಿಸಿದರು. ರವಿವಾರವೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿ ದ್ದರು. ಇಂದು ಸಂಜೆಯ ವರೆಗೂ ಇಲ್ಲಿ ಪೊಲೀಸರ ಪ್ರಶ್ನೆಗಳಿಗೆ ಸಮೀರ್ ಉತ್ತರಿಸಿದ್ದಾರೆ. ಸಮೀರ್ ಅವರ ಶಬ್ದ ದಾಖಲೀಕರಣ ಮಾಡಿರುವ ಬಗ್ಗೆ ತಿಳಿದು ಬಂದಿದೆ.
ಈ ಪ್ರಕರಣವಲ್ಲದೆ ಸಮೀರ್ ಎಂ.ಡಿ ವಿರುದ್ಧ ಉಜಿರೆಯ ಖಾಸಗಿ ಆಸ್ಪತ್ರೆಯ ಎದುರು ಅಕ್ರಮ ಕೂಟ ಸೇರಿದ ಬಗ್ಗೆ ದಾಖಲಾಗಿರುವ ಪ್ರಕರಣ ಹಾಗೂ ಖಾಸಗಿ ಚಾನೆಲ್ ವರದಿಗಾರನ ಮೇಲೆ ಹಲ್ಲೆ ನಡೆಸಿದ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಪುರ ಮಠ್ ಅವರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ರಾತ್ರಿ ಹತ್ತು ಗಂಟೆಯವರೆಗೂ ಮುಂದುವರಿದಿದೆ. ವಿಚಾರಣೆಯ ಬಳಿಕ ಸಮೀರ್ ಎಂ ಡಿ ತನ್ನ ನ್ಯಾಯವಾದಿಗಳೊಂದಿಗೆ ಹಿಂತಿರುಗಿದ್ದಾರೆ ಎಂದು ತಿಳಿದುಬಂದಿದೆ.