ಅಭಿವೃದ್ದಿ ವಿಚಾರದಲ್ಲಿ ಚುನಾವಣೆ ಎದುರಿಸಿ ಗೊತ್ತಿಲ್ಲದ ಬಿಜೆಪಿಗೆ ಈ ಬಾರಿ ಸೋಲು ಖಚಿತ ಎಂದು ಮನವರಿಕೆಯಾಗಿದೆ: ಪದ್ಮರಾಜ್. ಆರ್ ಪೂಜಾರಿ

Update: 2024-04-23 08:42 GMT

ಬಂಟ್ವಾಳ : ಚುನಾವಣೆಯನ್ನು ಅಭಿವೃದ್ದಿ ವಿಚಾರದಲ್ಲಿ ಎದುರಿಸಿ ಗೊತ್ತೇ ಇಲ್ಲದ ಬಿಜೆಪಿಗರು ಈ ಬಾರಿ ಸೋಲು ಖಚಿತ ಎಂದು ಮನವರಿಕೆಯಾದ ಬಳಿಕ ಇದೀಗ ಎಂದಿನಂತೆ ಕುತಂತ್ರದ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಹೇಳಿದ್ದಾರೆ.

ಚುನಾವಣಾ ಉಸ್ತುವಾರಿ, ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರ ನೇತೃತ್ವದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಂಟ್ವಾಳ ಬ್ಲಾಕ್ ವ್ಯಾಪ್ತಿಯಲ್ಲಿ ಸೋಮವಾರ ಮತಯಾಚನೆ ರ್‍ಯಾಲಿ ನಡೆಸಿ ಕಾವಳಮೂಡೂರು ಗ್ರಾಮದ ಕಾವಳಕಟ್ಟೆ-ಎನ್.ಸಿ ರೋಡ್ ಜಂಕ್ಷನ್ ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರ ಮಾಂಗಲ್ಯ ಹಾಗೂ ಧರ್ಮಗ್ರಂಥಗಳನ್ನು ಹಿಡಿದು ಆಣೆ-ಪ್ರಮಾಣ ನಡೆಸಿ ಆ ಮೂಲಕ ರಾಜಕೀಯ ನಡೆಸುವ ನೀಚ ಮಟ್ಟಕ್ಕೆ ಬಿಜೆಪಿಗರು ಕೊನೆ ಕ್ಷಣದಲ್ಲಿ ಇಳಿದಿರುವ ಬಗ್ಗೆ ಮಾಹಿತಿ ಬರುತ್ತಿದೆ. ಇನ್ನುಳಿದ ಎರಡು-ಮೂರು ದಿನಗಳ ಕಾಲ ಮತದಾರರು ಇವುಗಳ ಬಗ್ಗೆ ಬಹಳಷ್ಟು ಜಾಗರೂಕರಾಗಿರಬೇಕು ಎಂದರು.

ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿ ಯೋಜನೆಗಳು ಈಗಾಗಲೇ ರಾಜ್ಯದ ಪ್ರತಿಯೊಂದು ಮನೆ-ಮಗಳಿಗೂ ತಲುಪಿದ್ದು, ಇದರಿಂದ ಬಿಜೆಪಿಗರು ಅಭಿವೃದ್ದಿ ಹಾಗೂ ಜನಪರ ಕಾರ್ಯಕ್ರಮಗಳ ವಿಚಾರದಲ್ಲಿ ಚುನಾವಣೆ ಎದುರಿಸಲು ಸಾಧ್ಯವಾಗುತ್ತಿಲ್ಲ. ಎಲ್ಲಿ ಹೋದರೂ ಬಿಜೆಪಿಗರು ಜನರಿಂದ ಮಂಗಳಾರತಿಯನ್ನೇ ಎದುರಿಸುವಂತಾಗಿದೆ. ಕಾಂಗ್ರೆಸ್ ನೀಡಿದ ಭರವಸೆಗಳು ಕೆಲವೇ ದಿನಗಳಲ್ಲಿ ಈಡೇರಿದೆ. ನಮ್ಮ ಬದುಕು ಹಸನಾಗಿದೆ. ಆದರೆ ಮೋದಿ ಸರಕಾರ ಅಧಿಕಾರಕ್ಕೇರುವ ಮುಂಚೆ ನೀಡಿದ ಭರವಸೆಗಳಾದ 15 ಲಕ್ಷ ಹಣ, ಕಪ್ಪು ಹಣ ವಾಪಸಾತಿ, ಭ್ರಷ್ಟಾಚಾರ ನಿರ್ಮೂಲನೆ, 2 ಕೋಟಿ ಉದ್ಯೋಗ ಇವೆಲ್ಲವೂ ಎಲ್ಲಿದೆ?, ಯಾವುದೇ ಭರವಸೆ ಈಡೇರಿಸಲು ಕಳೆದ 10 ವರ್ಷಗಳಿಂದಲೂ ಸಾಧ್ಯವಾಗಿಲ್ಲ ಎಂಬ ಬಗ್ಗೆ ಜನರ ಪ್ರಶ್ನೆಗಳ ಸರಮಾಲೆ ಎದುರಿಸಲು ಸಾಧ್ಯವಾಗದೆ ಈಗಾಗಲೇ ಸೋಲೊಪ್ಪಿಕೊಂಡಿರುವ ಬಿಜೆಪಿಗರು ಇದೀಗ ಅಪಪ್ರಚಾರವನ್ನೇ ಮತ್ತೆ ನೆಚ್ಚಿಕೊಂಡಿದ್ದಾರೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಚುನಾವಣಾ ಪ್ರಚಾರ ಸಮಿತಿಯ ಪ್ರಮುಖರಾದ ಪಿಯೂಸ್. ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಚುನಾವಣಾ ವಾರ್ ರೂಂ ಮುಖ್ಯಸ್ಥ ಎಂ ಅಶ್ವನಿ ಕುಮಾರ್ ರೈ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಪ್ರಮುಖರಾದ ಪದ್ಮಶೇಖರ್ ಜೈನ್, ಹಾಜಿ ಬಿ.ಎಚ್. ಖಾದರ್ ಬಂಟ್ವಾಳ, ಕೆ ಪದ್ಮನಾಭ ರೈ, ಜಯಂತಿ ವಿ ಪೂಜಾರಿ, ವಿಲ್ಮಾ ಮೊರಾಸ್, ಶಬೀರ್ ಸಿದ್ದಕಟ್ಟೆ, ಚಂದ್ರಶೇಖರ್ ಕರ್ಣ, ಜಗದೀಶ ಕೊಯಿಲ, ಅಲ್ತಾಫ್ ಕುಲಾಯಿ, ರಾಜೇಶ್ ರೋಡ್ರಿಗಸ್, ಮುಹಮ್ಮದ್ ನಂದಾವರ, ಪ್ರವೀಣ್ ರೋಡ್ರಿಗಸ್, ಇಬ್ರಾಹಿಂ ಕೈಲಾರ್, ಶೇಖ್ ರಹ್ಮತುಲ್ಲಾ, ಶಬಾನಾ ಕಾವಳಕಟ್ಟೆ ಸಿದ್ದೀಕ್ ಸರವು, ಶರೀಫ್ ಭೂಯಾ, ಸಿರಾಜ್ ಮದಕ ಮೊದಲಾದವರು ಭಾಗವಹಿಸಿದ್ದರು.

ಚುನಾವಣಾ ಪ್ರಚಾರ ಜಾಥಾವು ಬಂಟ್ವಾಳ ಬ್ಲಾಕ್ ವ್ಯಾಪ್ತಿಯ ಬಡಗಕಜೆಕಾರು - ಪಾಂಡವರಕಲ್ಲುವಿನಿಂದ ಪ್ರಾರಂಭಗೊಂಡು, ಉಳಿ-ಕಕ್ಕೆಪದವು, ಮಣಿನಾಲ್ಕೂರು-ಮಾವಿನಕಟ್ಟೆ, ಸರಪಾಡಿ, ಅಲ್ಲಿಪಾದೆ, ನಾವೂರು, ಅಮ್ಟಾಡಿ, ಅರಳ, ಮೂಲರಪಟ್ಣ, ಕರ್ಪೆ, ಸಂಗಬೆಟ್ಟು, ಸಿದ್ದಕಟ್ಟೆ, ರಾಯಿ, ಪಂಜಿಕಲ್ಲು, ಆಚಾರಿಪಲ್ಕೆ, ಕುಕ್ಕಿಪ್ಪಾಡಿ-ಮಾವಿನಕಟ್ಟೆ, ಚೆನ್ನೈತ್ತೋಡಿ, ಬಸ್ತಿಕೋಡಿ, ಇರ್ವತ್ತೂರು, ಕಾವಳಮೂಡೂರು - ಎನ್.ಸಿ. ರೋಡ್ ಜಂಕ್ಷನ್ ಮೂಲಕ ಸಾಗಿ ಬಂದು ಕಾವಳಪಡೂರು - ಕಾರಿಂಜ ಜಂಕ್ಷನ್ನಿನಲ್ಲಿ ಸಮಾಪ್ತಿಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News