ಶಾಸಕ ಕಾಮತ್ ವಿರುದ್ಧ ಎಫ್‌ಐಆರ್ ಖಂಡಿಸಿ ಬಿಜೆಪಿ ಪ್ರತಿಭಟನೆ
ಮಂಗಳೂರು: ಶಾಸಕ ವೇದವ್ಯಾಸ ಕಾಮತ್ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಹಾಗೂ ಪರಿಶಿಷ್ಟ ಸಮುದಾಯದ ಯುವಕನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿ ದೌರ್ಜನ್ಯ ಎಸಗಿರುವುದನ್ನು ಖಂಡಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಮಂಗಳವಾರ ಹಂಪನಕಟ್ಟೆಯ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಯಿತು.
ಸಂಸದ ಬ್ರಿಜೇಶ ಚೌಟ ಮಾತನಾಡಿ, ಬಾಂಗ್ಲಾ ಮಾದರಿಯಲ್ಲಿ ಮಂಗಳೂರಿನಲ್ಲಿ ರಾಜ್ಯಪಾಲರನ್ನು ಓಡಿಸುತ್ತೇವೆ ಎಂದು ಹೇಳಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ಮೇಲೆ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಕಾನೂನು ಸಲಹೆ ಬೇಕಿತ್ತು. ಆದರೆ ಪುಂಡ ಪೋಕರಿಗಳು ಶಾಸಕರ ವಿರುದ್ಧ ದೂರು ನೀಡಿದಾಗ ಏನೆಂದು ವಿಚಾರಿಸದೆ ಎಫ್‌ಐಆರ್ ದಾಖಲಿಸಿದ್ದಾರೆ. ಜಿಲ್ಲೆಯಲ್ಲಿ ಇದು ಪ್ರಥಮ ಪ್ರಕರಣ ಅಲ್ಲ. ಈಗಾಗಲೇ ಹರೀಶ್ ಪೂಂಜಾ, ಭರತ್ ಶೆಟ್ಟಿ. ಈಗ ಕಾಮತ್ ಹೀಗೆ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಕಾಂಗ್ರೆಸ್‌ನ ಅಂತ್ಯ ಕರ್ನಾಟಕದಿಂದ ಆರಂಭವಾಗಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿದರು. ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಜಗೋಪಾಲ ರೈ, ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ಮನೋಜ್ ಕುಮಾರ್, ದಿವಾಕರ್ ಪಾಂಡೇಶ್ವರ, ಭಾನುಮತಿ, ವಿಜಯ ಕುಮಾರ್ ಶೆಟ್ಟಿ, ನಂದನ್ ಮಲ್ಯ, ನಿತಿನ್ ಕುಮಾರ್, ಪೂರ್ಣಿಮಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.