ಜಿ ರಾಮ್ ಐ ಕಾಯ್ದೆ ಕುರಿತು ಬಹಿರಂಗ ಚರ್ಚೆಗೆ ಬಿಜೆಪಿ ಸಿದ್ಧ: ಪ್ರತಾಪಸಿಂಹ ನಾಯಕ್
ಮಂಗಳೂರು, ಜ.13: ಜಿ ರಾಮ್ ಜಿ ಕಾಯ್ದೆ ಕುರಿತು ಬಹಿರಂಗ ವೇದಿಕೆ ಅಥವಾ ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆಗೆ ಬಿಜೆಪಿ ಸಿದ್ದವಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.
ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನ್‌ರೇಗಾದ ನ್ಯೂನತೆಗಳನ್ನು ಸರಿಪಡಿಸಿ ಹೊಸ ಕಾಯ್ದೆ ತರಲಾಗಿದೆ. ಜಿ ರಾಮ್ ಜಿ ಕಾಯ್ದೆಯಲ್ಲಿ ಗಾಂಧೀಜಿಯವರ ಪ್ರೀತಿಯ ರಾಮನ ಹೆಸರನ್ನು ತರಲಾಗಿದೆ ಎಂದರು.
ಕಳೆದ ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಅಭಿವೃದ್ಧಿ, ರೈತರು, ಕಾರ್ಮಿಕರು, ಮಹಿಳೆಯರ ಬಗ್ಗೆ ಚರ್ಚೆ ನಡೆಸದೇ ಸಿಎಂ ಯಾರು ಎಂಬ ಬಗ್ಗೆಯೇ ಚರ್ಚೆ ನಡೆದಿತ್ತು. ಅಭಿವೃದ್ಧಿ ವಿಚಾರಗಳನ್ನು ಚರ್ಚಿಸಲು ಅವೇಶನ ವಿಸ್ತರಿಸಿ ಎಂದು ಲಿಖಿತ ಮನವಿ ನೀಡಿದರೂ ಸರಕಾರ ಅಧಿವೇಶನ ವಿಸ್ತರಣೆ ಮಾಡಲಿಲ್ಲ. ಈಗ ಜಿ ರಾಮ್ ಜಿ ಕಾಯ್ದೆ ಬಗ್ಗೆ ಚರ್ಚಿ ಸಲು ವಿಶೇಷ ಅಧಿವೇಶನ ನಡೆಸುವ ಮಾತನ್ನಾಡುತ್ತಿದ್ದಾರೆ. ಆದರೆ, ಕೇಂದ್ರದ ಕಾಯ್ದೆ ವಿರುದ್ಧ ರಾಜ್ಯ ವಿಧಾನ ಸಭೆಯಲ್ಲಿ ಚರ್ಚಿಸುವುದು ಅಸಂವಿಧಾನಿಕವಾಗುತ್ತದೆ. ಈ ನಿರ್ಧಾರ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಜಿ ರಾಮ್ ಜಿ ಕಾಯ್ದೆ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆದಾಗ ಪ್ರತಿಪಕ್ಷವಾಗಿ ಕಾಂಗ್ರೆಸ್ ಏನು ಮಾಡಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರತಿಪಕ್ಷದ ಮಾತನ್ನು ತಾಳ್ಮೆಯಿಂದ ಆಲಿಸಿದ ಬಳಿಕ ಉತ್ತರ ನೀಡುವ ವೇಳೆ ಕಾಂಗ್ರೆಸ್ ಗದ್ದಲ ನಡೆಸಿತ್ತು. ಮಸೂದೆ ಬಗ್ಗೆ ಚರ್ಚೆ ನಡೆಸುವಾಗ ಪ್ರತಿಪಕ್ಷದ ನಾಯಕ ಸಂಸತ್‌ನ ಒಳಗೆ ಇರಲಿಲ್ಲ. ಕಾಂಗ್ರೆಸ್‌ಗೆ ಉತ್ತರ ಪಡೆಯವ ಉದ್ದೇಶ ಇರಲಿಲ್ಲ. ಜನರನ್ನು ತಪ್ಪುದಾರಿಗೆ ಎಳೆಯುವುದೇ ಕಾಂಗ್ರೆಸ್‌ನ ಉದ್ದೇಶ ಎಂದು ಪ್ರತಾಪ ಸಿಂಹ ನಾಯಕ್ ಹೇಳಿದರು.
ಕೇಂದ್ರ ಸರಕಾರದ ಪ್ರತಿ ಯೋಜನೆಗಳನ್ನು ಕಾಂಗ್ರೆಸ್ ವಿನಾಕಾರಣ ವಿರೋಧಿಸುತ್ತಿದೆ. ಜನಧನ್ ಯೋಜನೆಯನ್ನು ಕಾಂಗ್ರೆಸ್ ವಿರೋಧಿಸಿತ್ತು. ಈಗ ಮೊಬೈಲ್, ಆನ್‌ಲೈನ್ ವ್ಯವಹಾರದಲ್ಲಿ ದೇಶ ನಂ.1 ಆಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಆಯೋಗದ ಕೆಲಸ. ಈ ವಿಚಾರದಲ್ಲೂ ಕೇಂದ್ರ ಸರಕಾರವನ್ನು ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ. ಪ್ರತಿಪಕ್ಷವಾಗಿ ರಚನಾತ್ಮಕವಾಗಿ ಕೆಲಸ ಮಾಡದ ಕಾಂಗ್ರೆಸ್ ಜನರ ದಿಕ್ಕುತಪ್ಪಿಸುತ್ತಿದೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಮಯ್ಯ ಅವರು ಸುಳ್ಳು ಹೇಳಿಕೆಗಳನ್ನೇ ನೀಡುತ್ತಿದ್ದಾರೆ. ಕಳೆದ ಬಜೆಟ್‌ನ ಶೇ.50ರಷ್ಟು ಅನುದಾನವೂ ಖರ್ಚಾಗಿಲ್ಲ. ಇನ್ನು ಎರಡು ತಿಂಗಳಲ್ಲಿ ಮತ್ತೆ ಬಜೆಟ್ ಬರಲಿದೆ. ಗಾಳಿ ಹೊರತುಪಡಿಸಿ ಬೇರೆ ಎಲ್ಲದಕ್ಕೂ ರಾಜ್ಯ ಸರಕಾರ ತೆರಿಗೆ ಹಾಕುತ್ತಿದೆ ಅಥವಾ ತೆರಿಗೆ ಹೆಚ್ಚಳ ಮಾಡಿದೆ. ಆದರೆ, ಅಭಿವೃದ್ಧಿ ಕುಂಠಿತವಾಗಿದೆ. ರಸ್ತೆ ಹೊಂಡವನ್ನೂ ಮುಚ್ಚುತ್ತಿಲ್ಲ ಎಂದು ದೂರಿದರು.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ. ಮಂಜುಳಾ ರಾವ್, ಜಿಲ್ಲಾ ವಕ್ತಾರರಾದ ಸತೀಶ್ ಪ್ರಭು, ಅರುಣ್ ಶೇಟ್, ರಾಜಗೋಪಾಲ ರೈ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಮೂಡುಶೆಡ್ಡೆ, ಮಾಧ್ಯಮ ಪ್ರಮುಖ್ ಮನೋಹರ ಶೆಟ್ಟಿ ಉಪಸ್ಥಿತರಿದ್ದರು.
ಉದ್ಯೋಗ ಖಾತ್ರಿ ಯೋಜನೆ 1960ರಿಂದ ಜಾರಿಯಲ್ಲಿದ್ದು, ಜವಾಹರ್ ರೋಜ್‌ಗಾರ್ ಯೋಜನೆ, ಕೂಲಿಗಾಗಿ ಕಾಳು ಎಂಬುದಾಗಿ ಹೆಸರು ಬದಲಾಗುತ್ತಲೇ ಇದೆ. ದೇಶದಲ್ಲಿ ಗಾಂಧಿ ಹೆಸರಿಗಿಂತ ನೆಹರೂ ಅವರ ಹೆಸರಿನ ಹೆಚ್ಚಿನ ಯೋಜನೆಗಳಿವೆ. ಗಾಂಧಿ ಹೆಸರು ಇರಿಸಿಕೊಂಡಿರುವ ಕಾಂಗ್ರೆಸ್‌ನ ನಾಯಕರು ಗಾಂಧಿ ಕುಟುಂಬಿಕರಲ್ಲ, ಅವರೆಲ್ಲರೂ ನೆಹರೂ ವಂಶಸ್ಥರು. ಕಾಂಗ್ರೆಸ್‌ಗೆ ಗಾಂಧಿ ಹೆಸರು ಬೇಕು, ಅವರ ವಿಚಾರಗಳು ಬೇಡ. ಮನ್‌ರೇಗಾ ಯೋಜನೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ತಡೆಗೆ, ರಾಜ್ಯಗಳ ಉತ್ತರದಾಯಿತ್ವ ಹೆಚ್ಚಿಸಲು ಯೋಜನೆಯ ಸ್ವರೂಪ ಬದಲಿಸಲಾಗಿದೆ. ಈ ಬಗ್ಗೆ ಗ್ರಾಮ ಗ್ರಾಮಗಳಲ್ಲಿ ಜನತೆಗೆ ಮನವರಿಕೆ ಮಾಡಲಾಗುವುದು ಎಂದು ಪ್ರತಾಪ ಸಿಂಹ ನಾಯಕ್ ಹೇಳಿದರು.