ಬಜ್ಪೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಬಿಜೆಪಿ ಗೆಲುವು ಕರ್ನಾಟಕದ ಮುಂದಿನ ಚುನಾವಣೆಗೆ ದಿಕ್ಸೂಚಿ: ಸಂಸದ ಬ್ರಿಜೇಶ್ ಚೌಟ
ಮಂಗಳೂರು,ಜ.4: ಕಿನ್ನಿಗೋಳಿ ಹಾಗೂ ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ ಗೆಲುವು ಕರಾವಳಿ ಜನರ ಸ್ವಾಭಿಮಾನ ಕೆಣಕಿರುವ ಕಾಂಗ್ರೆಸ್‌ಗೆ ತಕ್ಕ ಉತ್ತರವಾಗಿದ್ದು, ಆ ಮೂಲಕ ಬಿಜೆಪಿಯ ಈ ವಿಜಯಯಾತ್ರೆಯು ಇದೀಗ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದಿಂದಲೇ ಆರಂಭವಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.
ಕಿನ್ನಿಗೋಳಿ ಹಾಗೂ ಬಜ್ಪೆ ಪಟ್ಟಣ ಪಂಚಾಯತ್ ಚುನಾಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ರವಿವಾರ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ವಿಜಯೋತ್ಸವ ಹಾಗೂ ಗೆಲುವು ಸಾಧಿಸಿದ ಅಭ್ಯರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಜ್ಪೆ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನಲ್ಲಿನ ಬಿಜೆಪಿ ಅಭ್ಯರ್ಥಿಗಳ ಈ ಗೆಲುವು ಅತ್ಯಂತ ವಿಶಿಷ್ಟವಾದ ಗೆಲುವು. ಬಜ್ಪೆ ಅಥವಾ ಕಿನ್ನಿಗೋಳಿಗೆ ಸೀಮಿತವಾದ ಗೆಲುವು ಇದಲ್ಲ; ಬದಲಿಗೆ ಇಡೀ ಕರಾವಳಿ ಕರ್ನಾಟಕದ ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರ ಸ್ವಾಭಿಮಾನದ ಗೆಲುವು ಎಂದು ನುಡಿದರು.
ಕರಾವಳಿ ಜನರು ಹಿಂದುತ್ವ, ರಾಷ್ಟ್ರೀಯತೆ ಪರ ಇರುವವರು. ಜಿಲ್ಲೆಯ ಜನರ ಸ್ವಾಭಿಮಾನ ಕೆಣಿಕಿಸುವುದಕ್ಕೆ ಅಥವಾ ಅವಮಾನಿಸುವ ಯತ್ನ ಮಾಡಿದರೆ ಮುಂದೆ ಯಾವುದೇ ಚುನಾವಣೆ ಬಂದರೂ ಕರಾವಳಿ ಮಾತ್ರವಲ್ಲ ರಾಜ್ಯದಲ್ಲೇ ಇದೇ ರೀತಿಯ ಉತ್ತರವನ್ನು ಮತದಾರರು ನೀಡುತ್ತಾರೆ ಎಂದು ಚೌಟ ಸವಾಲು ಹಾಕಿದ್ದಾರೆ.
ರಾಜ್ಯದಲ್ಲಿ ಯಾವಾಗ ಚುನಾವಣೆ ಬರಬಹುದು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಹಾಗೂ ಅದನ್ನು ಎದುರಿಸು ವುದಕ್ಕೆ ನಮ್ಮ ಕಾರ್ಯಕರ್ತರು ಸಿದ್ಧರಾಗಿರಬೇಕು. ಬಜಪೆ ಹಾಗೂ ಮುಲ್ಕಿ ಪಟ್ಟಣ ಪಂಚಾಯತ್ನಲ್ಲಿ ಬಿಜೆಪಿ ಗೆಲುವು ಸಾಧಿಸುವುದಕ್ಕೆ ಇಲ್ಲಿನ ಮತದಾರರು ಹಾಗೂ ಅಭಿವೃದ್ಧಿಯೇ ಮುಖ್ಯ ಕಾರಣ. ಶಾಸಕರಾದ ಉಮಾನಾಥ ಕೋಟ್ಯಾನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾದರಿಯಲ್ಲೇ ಮುಲ್ಕಿ ಕ್ಷೇತ್ರವನ್ನು ಅಭಿವೃದ್ಧಿಪಡಿ ಸುತ್ತಿದ್ದಾರೆ. ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಮಾಡದೆ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ.
ಬಜ್ಪೆ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು. ಇದಕ್ಕೂ ಮೊದಲು ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಅಭ್ಯರ್ಥಿಗಳು ಹಾಗೂ ಪಕ್ಷದ ಕಾರ್ಯಕರ್ತರು ಪುನರೂರು ದ್ವಾರದಿಂದ ಕಟೀಲು ದೇವಸ್ಥಾನದವರೆಗೆ ಹಾಗೂ ಮರವೂರಿನಿಂದ ಸ್ವಾಮಿಲಪದವು ಜಂಕ್ಷನ್ವರೆಗೂ ವಿಜಯೋತ್ಸವ ಮೆರವಣಿಗೆ ನಡೆಸಿದರು.
ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ , ಮೂಲ್ಕಿ ಮೂಡುಬಿದಿರೆ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಸೇರಿದಂತೆ ಹಲವು ಮುಖಂಡರು, ಪದಾಧಿಕಾರಿಗಳು ಭಾಗವಹಿಸಿದ್ದರು.