ಜ.11ರಂದು ವಿಶಿಷ್ಟರಿಗಾಗಿ ವಿಶಿಷ್ಟ ಮೇಳ 2026
ಮಂಗಳೂರು: ಸೇವಾ ಭಾರತಿ ಮಂಗಳೂರು ಇದರ ಅಂಗಸಂಸ್ಥೆ ಆಶಾಜ್ಯೋತಿ ವತಿಯಿಂದ ಕೆನರಾ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜ.11ರಂದು ಬೆಳಗ್ಗೆ 8:30ರಿಂದ ಸಂಜೆ 4:15ರ ತನಕ ಮಂಗಳೂರಿನ ಡೊಂಗರಕೇರಿಯ ಕೆನರಾ ಹೈಸ್ಕೂಲ್ ಮೈದಾನದಲ್ಲಿ ವಿಶಿಷ್ಟರಿಗಾಗಿ ವಿಶಿಷ್ಟ ಮೇಳ 2026 ಆಯೋಜಿಸಲಾಗಿದೆ ಎಂದು ಆಶಾಜ್ಯೋತಿ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು ಬೆಳಿಗ್ಗೆ 9:30ಕ್ಕೆ ನಿಟ್ಟೆ ವಿಶ್ವವಿದ್ಯಾನಿಲಯ ಉಪ ಸಹ ಕುಲಪತಿ ಡಾ. ಶಾಂತಾರಾಮ್ ಶೆಟ್ಟಿ ಮೇಳದ ಉದ್ಘಾಟನೆಯನ್ನು ನೆರವೇರಿಸುವರು. ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ರಾಘವೇಂದ್ರ ಎಸ್. ಭಟ್, ಮಂಗಳೂರು ಎಂಆರ್‌ಪಿಎಲ್ ಮಾನವ ಸಂಪನ್ಮೂಲ ವಿಭಾಗದ ಜಿಜಿಎಂ ಕೃಷ್ಣ ಹೆಗ್ಡೆ ಮಿಯಾರ್ ಅತಿಥಿಯಾಗಿ ಭಾಗವಹಿಸುವರು. ದ.ಕ, ಉಡುಪಿ ಜಿಲ್ಲೆಗಳ ವಿಶೇಷ ಶಾಲೆಗಳ ಮಕ್ಕಳ ಸಹಿತ ಎಲ್ಲ ವಯೋಮಾನದ ದಿವ್ಯಾಂಗರಿಗಾಗಿ ಈ ಮೇಳ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
18 ವರ್ಷ ಮೇಲ್ಪಟ್ಟ ಸ್ವಲೀನತೆ (ಆಟಿಸಂ), ಸೆರೆಬ್ರಲ್ ಪಾಲ್ಸಿ, ಮಾನಸಿಕ ಕುಂಠಿತ ದಿವ್ಯಾಂಗರಿಗೆ ಕಾನೂನು ಬದ್ಧ ಪೋಷಕತ್ವ ಪ್ರಮಾಣ ಪತ್ರ ಪಡೆಯುವ ಬಗ್ಗೆ ಮತ್ತು ನಿರಾಮಯ ಆರೋಗ್ಯ ಕಾರ್ಡ್ ಬಗ್ಗೆ ಸಂಪೂರ್ಣ ಮಾಹಿತಿ ಯನ್ನು ಈ ಬಾರಿಯ ಮೇಳದಲ್ಲಿ ನೀಡಲಾಗುವುದು ಎಂದರು.
‘ಸಕ್ಷಮ’ ಸಂಸ್ಥೆಯ ವತಿಯಿಂದ ದಿವ್ಯಾಂಗರ ಸಬಲೀಕರಣ ಮತ್ತು ನೇತ್ರದಾನದ ಬಗ್ಗೆ ಮಾಹಿತಿ ನೀಡಲಾಗುವುದು. 7 ಮಂದಿ ದಿವ್ಯಾಂಗ ವಿದ್ಯಾರ್ಥಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಆಶಾಜ್ಯೋತಿಯು ದಿವ್ಯಾಂಗರು ಮತ್ತು ಅವರ ಹೆತ್ತವರಿಗೆ ಕಳೆದ ಡಿಸೆಂಬರ್ 21ರಂದು ಪ್ರವಾಸವನ್ನು ಆಯೋಜಿಸಿಸಲಗಿತ್ತು. ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ಮತ್ತು ಸೇವಾ ಭಾರತಿ ಸಂಸ್ಥೆಯು ಮೊಂಟೆಪದವು ಮಾಧವ ವನದ ಕ್ಯಾಂಪಸ್ ಹಾಗೂ ಅಲ್ಲಿನ ಉದ್ಯಾನವನಕ್ಕೆ ಕರೆದುಕೊಂಡು ಹೋಗಲಾಗಿತ್ತು. 190 ಮಂದಿ ದಿವ್ಯಾಂಗರು ಮತ್ತು ಪೋಷಕರು, ಶಿಕ್ಷಕರು ಈ ಪ್ರವಾಸದಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು.
ಸೇವಾ ಭಾರತಿ ಮಂಗಳೂರು ವತಿಯಿಂದ ನರಿಂಗಾನ ಗ್ರಾಮದ ಮೊಂಟೆಪದವಿನಲ್ಲಿ ದಿವ್ಯಾಂಗರಿಗಾಗಿ ಮಾಧವ ವನ ಆರಂಭಿಸಲಾಗಿದೆ. ದಿವ್ಯಾಂಗರಿಗೆ ಶಾಶ್ವತ ನೆಲೆ ಕಲ್ಪಿಸುವ ಉದ್ದೇಶದಿಂದ ಈ ಸಂಸ್ಥೆ ಪ್ರಾರಂಭಿಸಲಾಗಿದೆ. ಪ್ರಸ್ತುತ ಇಲ್ಲಿ ಹಗಲು ಪಾಲನಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. 300 ಮಂದಿ ದಿವ್ಯಾಂಗರಿಗೆ ವಸತಿ ವ್ಯವಸ್ಥೆಯ ಸಾಮರ್ಥ್ಯ ಇರುವ ಈ ಕೇಂದ್ರದಲ್ಲಿ ದಿನದ 24 ಗಂಟೆಯೂ ದಿವ್ಯಾಂಗರಿಗೆ ವಸತಿ ವ್ಯವಸ್ಥೆ ಶೀಘ್ರ ಆರಂಭವಾಗಲಿದೆ ಎಂದು ಸೇವಾಭಾರತಿ ಮಂಗಳೂರು ಗೌರವ ಕಾರ್ಯದರ್ಶಿ ಎಚ್. ನಾಗರಾಜ ಭಟ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಶಾಜ್ಯೋತಿ ಸಂಸ್ಥೆಯ ಜೊತೆ ಕಾರ್ಯದರ್ಶಿ ಗಣರಾಜ ವೈ., ಖಜಾಂಚಿ ಕೆ. ವಿಶ್ವನಾಥ ಪೈ, ಜೊತೆ ಕಾರ್ಯದರ್ಶಿ ಫಣೀಂದ್ರ, ಸೇವಾಭಾರತಿ ಮಂಗಳೂರು ಗೌರವ ಕಾರ್ಯದರ್ಶಿ ಎಚ್. ನಾಗರಾಜ ಭಟ್, ಖಜಾಂಚಿ ಪಿ. ವಿನೋದ್ ಶೆಣೈ ಉಪಸ್ಥಿತರಿದ್ದರು.
*ವಿಶಿಷ್ಟ ಮೇಳದ ವಿಶೇಷತೆ
ಮೇಳದಲ್ಲಿ ಬೆಳಗ್ಗೆ 8:30ಡಿ ಕ್ಕೆ ನೋಂದಣಿ, 9:30ಕ್ಕೆ ಸಭಾ ಕಾರ್ಯಕ್ರಮ, 10.15ರಿಂದ ದಿವ್ಯಾಂಗರಿಗೆ ವಿವಿಧ ಚಟುವಟಿಕೆಗಳು, ಮನೋರಂಜನೆಗಳು, ಮಧ್ಯಾಹ್ನ 1ಕ್ಕೆ ಭೋಜನ, 2ರಿಂದ ದಿವ್ಯಾಂಗರಿಂದ ಪ್ರತಿಭಾ ಪ್ರದರ್ಶನ ನಡೆಯಲಿದೆ. ಮೇಳದಲ್ಲಿ ತಿರುಗುವ ಕುದುರೆ, ತಿರುಗುವ ತೊಟ್ಟಿಲು, 25ಕ್ಕೂ ಅಧಿಕ ತಿಂಡಿ ತಿನಿಸುಗಳ ಮಳಿಗೆಗಳು, ಪಾನೀಯ ಮಳಿಗೆಗಳು, ಹಣ್ಣಿನ ಅಂಗಡಿಗಳು, ಬೇತಾಳ ಕುಣಿತ, ಮನೋರಂಜನಾ ಆಟಗಳು, ಕುದುರೆ, ಒಂಟೆ ಸವಾರಿ ಇರಲಿದೆ. ಮೇಳದಲ್ಲಿ ವಿಶಿಷ್ಟರಿಗೆ ಎಲ್ಲವೂ ಮುಕ್ತ ಮತ್ತು ಉಚಿತ ಎಂದು ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ತಿಳಿಸಿದರು.