ಕೋಳಿ ಅಂಕವನ್ನು ತಡೆಯಲು ಹೊರಟಿದ್ದಾರೆಂದು ಪಟ್ಟಭದ್ರ ಹಿತಾಸಕ್ತಿಗಳಿಂದ ಅಪಪ್ರಚಾರ: ಬಿ.ಕೆ.ಹರಿಪ್ರಸಾದ್ ಸ್ಪಷ್ಟನೆ
ಬೆಂಗಳೂರು: ಗರೋಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಕೋಳಿ ಅಂಕ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ನಡೆಸುತ್ತಿರುವ ಅಪಪ್ರಚಾರ ನಿಲ್ಲಿಸಿ ಎಂದು ವಿಧಾನ ಪರಿಷತ್ತಿನ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಶನಿವಾರ ಈ ಕುರಿತು ತಮ್ಮ ಎಕ್ಸ್ ಖಾತೆಯಿಂದ ಪ್ರತಿಕ್ರಿಯಿಸಿರುವ ಅವರು, ಕೋಳಿ ಅಂಕವನ್ನು ಪೊಲೀಸ್ ಬಲದ ಹರಿಪ್ರಸಾದ್ ತಡೆಯಲು ಹೊರಟಿದ್ದಾರೆ ಎಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ, ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಆದರೆ, ಈ ವಿಚಾರವೇ ನನ್ನ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ಕೋಳಿ ಅಂಕದ ಸಂಬಂಧ ಯಾವುದೇ ವ್ಯಕ್ತಿಗಳಾಗಲೀ, ಸಂಘಟನೆಯವರಾಗಲೀ, ಇಲಾಖೆಯವರಾಗಲೀ ನನ್ನ ಜೊತೆ ಮಾತುಕತೆಯನ್ನೆ ಮಾಡಿರುವುದಿಲ್ಲ. ಹಾಗಾಗಿ ಅದನ್ನು ತಡೆಯುವ ಅಥವಾ ಬೆಂಬಲಿಸುವ ಪ್ರಶ್ನೆಯೇ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಾನು ಶ್ರೀ ನಾರಾಯಣ ಗುರುಗಳು ಬೋಧಿಸಿದ ತತ್ವಾದರ್ಶಗಳಂತೆ ಬದುಕುವವನು. ಶ್ರೀ ನಾರಾಯಣ ಗುರು-ಗಾಂಧಿ-ಅಂಬೇಡ್ಕರ್ ಹಾದಿಯಲ್ಲಿ ನಾನು ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಇಂತಹ ಸುಳ್ಳು ಅಪಪ್ರಚಾರಗಳಿಗೆ ನಾನು ಹೆದರುವುದಿಲ್ಲ. ನಾನು ಕರಾವಳಿಯ ಮೂಢನಂಬಿಕೆ ರಹಿತ, ಜೂಜು ರಹಿತ, ಅಸ್ಪೃಶ್ಯತೆ, ಅಸಮಾನತೆ ರಹಿತ ಎಲ್ಲ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ಬೆಂಬಲಿಸುತ್ತಲೇ ಬಂದಿದ್ದೇನೆ. ಸೌಹಾರ್ದತೆಯ ಸಂದೇಶ ಸಾರುವ ಆಚರಣೆಗಳನ್ನು ಬೆಂಬಲಿಸುತ್ತಲೆ ಇರುತ್ತೇನೆ ಎಂದು ಅವರು ತಿಳಿಸಿದ್ದಾರೆ.
"ಗರೋಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಕೋಳಿ ಅಂಕವನ್ನು ಪೊಲೀಸ್ ಬಲದ ಬಿ ಕೆ ಹರಿಪ್ರಸಾದ್ ತಡೆಯಲು ಹೊರಟಿದ್ದಾರೆ" ಎಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ, ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ.
— Hariprasad.B.K. (@HariprasadBK2) January 3, 2026
ಗರೋಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದ ಜಾತ್ರಾ… pic.twitter.com/cvuFPs2dZs