ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘವು ಸಮಾಜಮುಖಿ ಚಿಂತನೆಯೊಂದಿಗೆ ಸಮಾಜಕ್ಕೆ ಕೊಡುಗೆ ನೀಡಿದೆ : ಕೆ.ಟಿ.ಸುವರ್ಣ
ಕೊಣಾಜೆ : ಕೊಣಾಜೆಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘವು ಕಳೆದ ನಲ್ವತ್ತಕ್ಕೂ ಹೆಚ್ಚು ವರ್ಷದಿಂದ ಸಮಾಜಮುಖಿ ಚಿಂತನೆಯೊಂದಿಗೆ ಮುನ್ನಡೆದು ಸಮಾಜಕ್ಕೆ ಕೊಡುಗೆ ನೀಡಿದೆ. ಸಂಘದ ಸೇವಾ ಮನೋಭಾವ, ಸಂಘದಲ್ಲಿ ದುಡಿದ ಹಿರಿಯರ ಪರಿಶ್ರಮ ಮತ್ತು ಸೇವಾ ನಿಷ್ಠೆಯಿಂದ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಹ್ಯಾದ್ರಿ ಕೋ ಅಪರೇಟಿವ್ ಸೊಸೈಟಿ, ತೊಕ್ಕೊಟ್ಟು ಇದರ ಅಧ್ಯಕ್ಷರಾದ ಕೆ.ಟಿ.ಸುವರ್ಣ ಅವರು ಹೇಳಿದರು.
ಗ್ರಾಮಚಾವಡಿಯಲ್ಲಿ ರವಿವಾರ ನಡೆದ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಂಸ್ಥೆಯಾದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ(ರಿ)ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಾಜಿ ತಾಲೂಕು ಪಂಚಾಯತ್ ಸದಸ್ಯ ಮಹಮ್ಮದ್ ಮುಸ್ತಫಾ ಮಲಾರ್ ಅವರು ಮಾತನಾಡಿ, ಒಂದು ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಸಂಘದ ಹಿರಿಯರ ಆಶೀರ್ವಾದ ಹಾಗೂ ಒಗ್ಗಟ್ಡು ಬಹಳ ಮುಖ್ಯ ಪಾತ್ರವಹಿಸುತ್ತದೆ. ಮುಂದೆ ಈ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿಯೂ ಒಲಿದು ಬರುವಂತಾಗಲಿ ಎಂದರು.
ಕಾಪಿಕಾಡು ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎ.ಜೆ.ಶೇಖರ್, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ಅಚ್ಯುತಗಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವತ್ತೆಬೈಲ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಮೋನು, ಮುಖಂಡರಾದ ಅಬ್ದುಲ್ ರಹಿಮಾನ್ ಕೊಣಾಜೆ, ಮಂಗಳಾ ಯುವಕ ಮಂಡಲ ಅಧ್ಯಕ್ಷರಾದ ಎ.ಕೆ.ಅಬ್ದುಲ್ ರಹಿಮಾನ್, ನಾಟಿ ವೈದ್ಯರಾದ ಶಂಕರಾನಂದ ಇನ್ನವಳ್ಳಿ, ಸಮಾಜ ಸೇವಕರಾದ ಉಗ್ಗಪ್ಪ ಪೂಜಾರಿ ಪಾವೂರು, ಕೊಣಾಜೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೀತಾ ದಾಮೋದರ್ ಕುಂದರ್, ಯಶವಂತ ದೇರಾಜೆ, ಪಜೀರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಲತಾ ಹರಿಪ್ರಸಾದ್, ಪಜೀರು ಪಂಚಾಯತ್ ಮಾಜಿ ಅಧ್ಯಕ್ಷರಾದ ಇಂತಿಯಾಝ್ ಪಜೀರು, ಮುಖಂಡರಾದ ರಾಜೀವ ಪೂಜಾರಿ, ನಿವೃತ್ತ ಶಿಕ್ಷಕ ಆನಂದ, ಶಿವಪ್ಪ ಪೂಜಾರಿ ಬೆಳರಿಂಗೆ, ಯುವವಾಹಿನಿ ಘಟಕದ ಅಧ್ಯಕ್ಷರಾದ ಬಾಬು ಬಂಗೇರ, ನಾರಾಯಣ ಗುರು ಸೇವಾ ಸಂಘದ ಮಹಿಳಾ ಸಮಿತಿಯ ಅಧ್ಯಕ್ಷರಾದ ಬಬಿತಾ ಬಾನಬೆಟ್ಡು ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾದ ವಿಜೇತ್ ಪಜೀರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ಮಾಜಿ ಅಧ್ಯಕ್ಷರಾದ ರವೀಂದ್ರ ಬಂಗೇರ ಅವರು ಸ್ವಾಗತಿಸಿದರು. ಅಜಿತ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸೇವೆ ಮಾಡುವುದಕ್ಕೆ ಪ್ರೇರಣೆ ನೀಡಿದ ಸಂಘಕ್ಕೆ ಬೆನ್ನೆಲುಬಾಗಿ ನಿಂತು ನಿಷ್ಢೆ, ಪರಿಶ್ರಮದಿಂದ ಬೆವರು ಸುರಿಸಿ ದುಡಿದ ಬ್ರಹ್ಮಶ್ರೀ ಸೇವಾ ಸಂಘದ ಹಿರಿಯರಿಗೆ ಹಾಗೂ ಪ್ರಾಮಾಣಿಕವಾಗಿ ದುಡಿದ ಎಲ್ಲಾ ಸದಸ್ಯರು, ಪದಾಧಿಕಾರಿಗಳಿಗೆ ಈ ಪುರಸ್ಕಾರದ ಗೌರವ ಸಲ್ಲುತ್ತದೆ.
ವಿಜೇತ್ ಪಜೀರು, ಅಧ್ಯಕ್ಷರು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಗ್ರಾಮಚಾವಡಿ