ಮಂಗಳೂರು | ಎಂಸಿಎಫ್ ಹೆಸರು ಉಳಿಸಿ: ನಿವೃತ್ತ ನೌಕರರ ಅಭಿಯಾನ
ಮಂಗಳೂರು, ಡಿ.12: ಪಣಂಬೂರು ಬಳಿಯ ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ (ಎಂಸಿಎಫ್) ಹೆಸರನ್ನು ತೆಗೆದು ಪಾರದೀಪ್ ಫಾಸ್ಪೇಟ್ಸ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಗಿದೆ. ಇದಕ್ಕೆ ಅವಕಾಶ ನೀಡದೆ ಅದನ್ನು ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ ಎಂದೇ ಮುಂದುವರಿಸಬೇಕು ಎಂದು ಸಂಸ್ಥೆಯ ನಿವೃತ್ತ ನೌಕರರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಎಂಸಿಎಫ್ ಹೆಸರು ಉಳಿಸಿ ಅಭಿಯಾನ ಸಮಿತಿ ರಚಿಸಿಕೊಂಡಿರುವ ನಿವೃತ್ತ ನೌಕರರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಈ ಆಗ್ರಹ ಮಾಡಿದರು.
ಸಮಿತಿಯ ಸದಸ್ಯರಾದ ಮ್ಯಾಕ್ಸಿಮ್ ಅಲ್ಫ್ರೆಡ್ ಡಿಸೋಜಾ ಮಾತನಾಡಿ, 1971ರಲ್ಲಿ ರಾಜಯ ಸರಕಾರ, ರಾಜ್ಯದ ಹೂಡಿಕೆದಾರರು ಮತ್ತು ರೈತರ ಪಾಲುದಾರಿಕೆಯೊಂದಿಗೆ ಸ್ಥಾಪನೆಯಾದ ಎಂಸಿಎಫ್ ಕಾರ್ಖಾನೆ 1976ರಲ್ಲಿ ವಾಣಿಜ್ಯ ಉತ್ಪಾದನೆ ಆರಂಭಿಸಿತ್ತು. ರಾಜ್ಯದ ಏಕೈಕ ಬೃಹತ್ ರಸಗೊಬ್ಬರ ಕೈಗಾರಿಕೆ ಇದಾಗಿದ್ದು, ಸ್ಥಳೀಯ ಜನರ ಭೂ ತ್ಯಾಗ, ಸ್ಥಳೀಯ ನದಿಗಳ ನೀರಿನ ಬಳಕೆ, ಕಚ್ಚಾ ವಸ್ತುವಾಗಿ ಇಲ್ಲಿನ ಗಾಳಿ ಬಳಕೆ, ಪರಿಸರ ಪರಿಣಾಮಗಳ ಹೊರೆ ಮತ್ತು ಸಮುದಾಯ ಎಲ್ಲವೂ ಈ ಸಂಸ್ತೆಯ ಬೆಳವಣಿಗೆಗೆ ಕಾರಣವಾಗಿದೆ. ಪಾದೇಶಿಕ ಅಸ್ಮಿತೆಯ ಹೆಸರನ್ನು ಇದೀಗ ರಾತ್ರೋರಾತ್ರಿ ಬದಲಾಯಿಸುವುದನ್ನು ಖಂಡಿಸುತ್ತೇವೆ ಎಂದರು.
ಇದು ಹೆಸರಿನ ಬದಲಾವಣೆ ಮಾತ್ರವಲ್ಲ, ಎಂಸಿಎಫ್ ಹೊಂದಿರುವ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಮಹತ್ವದ ಅಗೌರವವಾಗಿದೆ. 35 ವರ್ಷಗಳ ಕಾಲ ಖಾಸಗಿ ಒಡೆತನವಿದ್ದರೂ ಎಂಸಿಎಫ್‌ನಲ್ಲಿ ಯಾವುದೇ ನೇರ ಹೂಡಿಕೆಯಾಗಿಲ್ಲ. ಬದಲಾಗಿ ಎಂಸಿಎಫ್ ತನ್ನದೇ ಆಂತರಿಕ ಹೂಡಿಕೆ ಮತ್ತು ಬ್ಯಾಂಕ್ ಸಾಲದ ಮೂಲಕ ಪುನಶ್ಚೇತನಗೊಂಡಿದೆ. ಹಾಗಾಗಿ ಎಂಸಿಎಫ್ ಹೆಸರನ್ನು ಮರುಸ್ಥಾಪಿಸಬೇಕು ಎಂಬದು ನಮ್ಮ ಆಗ್ರಹ ಎಂದು ಅವರು ಹೇಳಿದರು.
ಗೋಷ್ಟಿಯಲ್ಲಿ ಸಮಿತಿ ಸದಸ್ಯರಾದ ಶಿವರಾಮ ಶೆಟ್ಟಿ, ದಯಾನಂದ ಶೆಟ್ಟಿ, ಜಯರಾಮ ಶೆಟ್ಟಿ, ಮುಹಮ್ಮದ್ ಅಲಿ, ಪಿ.ವಿ. ಶಬರಾಯ ಉಪಸ್ಥಿತರಿದ್ದರು.