ಕೊಣಾಜೆ | ಭಾರತೀಯ ವೈದ್ಯರ ವೃತ್ತಿ ನಿಷ್ಠೆ ಬೇರೆಲ್ಲೂ ಕಾಣಸಿಗದು : ಸಂಸದ ಕ್ಯಾ.ಬ್ರಿಜೇಶ್ ಚೌಟ
ಕೊಣಾಜೆ: ವೈದ್ಯರನ್ನು ದೇವರ ಸ್ಥಾನದಲ್ಲಿ ನೋಡುವ ಸಂಸ್ಕೃತಿ ಭಾರತೀಯರದ್ದು. ಭಾರತೀಯ ವೈದ್ಯರ ಸಾಮರ್ಥ್ಯ ಹಾಗೂ ವೃತ್ತಿನಿಷ್ಠೆ ಬೇರೆ ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಇಂತಹ ಭಾರತೀಯ ವೈದ್ಯ ಪರಂಪರೆಯ ಮಹತ್ವವನ್ನು ಅರಿತುಕೊಂಡು ಆ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುವ ಜವಬ್ಧಾರಿ ಇಂದಿನ ಯುವ ವೈದ್ಯರಿಗಿದೆ ಎಂದು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಹೇಳಿದರು.
ಅವರು ಸೋಮವಾರ ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ನ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ವೈಟ್ ಕೋಟ್ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವೈದ್ಯಕೀಯ ವೃತ್ತಿ ಕೇವಲ ವೃತ್ತಿ ಮಾತ್ರವಲ್ಲ, ಜನರ ಆರೋಗ್ಯ, ಜೀವದ ರಕ್ಷಣೆಯೊಂದಿಗೆ ನಮ್ಮ ಸಮಾಜಕ್ಕೆ, ರಾಷ್ಟ್ರಕ್ಕೆ ಅವರ ಕೊಡುಗೆ ಅಪಾರವಾದುದು. ಈ ವೃತ್ತಿ ಬದುಕಿಗೆ ಸ್ಪೂರ್ತಿಯೂ ಹೌದು ತಪಸ್ಸು ಕೂಡಾ ಆಗಿದೆ ಎಂದರು.
ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ಬಳಿಕ ದೇಶದ ಜನರ ವೈದ್ಯಕೀಯ ಕ್ಷೇತ್ರ ಮತ್ತು ಆರೋಗ್ಯ ಸಂರಕ್ಷಣೆಯ ವಲಯಗಳಲ್ಲಿ ಅನೇಕ ಮಹತ್ತರವಾದ ಬದಲಾವಣೆಗಳಾಗಿವೆ. ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಜನೌಷಧಿ ಯೋಜನೆ, ಇಂಧ್ರಧನುಷ್ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಹೆಲ್ತ್ ಕೇರ್ ಕ್ಷೇತ್ರದ ಭದ್ರಬುನಾದಿಯನ್ನು ಗಟ್ಟಿಗೊಳಿಸಿದೆ ಎಂದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂತಹ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದು ಬಿಳಿ ಕೋಟ್ ಧರಿಸುವ ಅವಕಾಶ ಹೆಚ್ಷಿನವರಿಗೆ ಸಿಗುವುದಿಲ್ಲ. ಇದೊಂದು ಜೀವನದ ಭಾಗ್ಯ ಮತ್ತು ಜೀವನದ ಸುವರ್ಣಾವಕಾಶವಾಗಿದೆ. ಪದವಿಗಳಿಸಿದ ಬಳಿಕ ಈ ವೃತ್ತಿಗೆ ಸಿಗುವ ಗೌರವಯುತ ಸ್ಥಾನ ಬಹಳ ವಿಶೇಷವಾದುದು ಎಂದರು.
ಕಣಚೂರು ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ.ಯು.ಕೆ.ಮೋನು ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಇಂದು ವೈಟ್ ಕೋಟ್ ಪಡೆದ ವಿದ್ಯಾರ್ಥಿಗಳು ಮುಂದೆ ಪದವಿಯೊಂದಿಗೆ ಸಮಾಜದಲ್ಲಿ ಮೇಲ್ಪಂಕ್ತೀಯ ಸ್ಥಾನದಲ್ಲಿ ಗುರುತಿಸಲಿದ್ದೀರಿ. ಅವಕಾಶಗಳ ಸದ್ಭಳಕೆ ಮಾಡಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತಾಬೇಕು ಎಂದರು.
ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ, ಸಲಹಾ ಸಮಿತಿ ಸದಸ್ಯ ವೈದ್ಯರಾದ ಡಾ.ಎಂ.ವಿ ಪ್ರಭು, ಕಣಚೂರು ಮೆಡಿಕಲ್ ಕಾಲೇಜಿನ ಸಲಹಾ ಸಮಿತಿ ಅಧ್ಯಕ್ಷರಾದ ಡಾ.ಇಸ್ಮಾಯಿಲ್ ಹೆಜಮಾಡಿ, ಡೀನ್ ಡಾ.ಶಾನವಾಝ್ ಮನ್ನಿಪ್ಪಾಡಿ, ಮೆಡಿಕಲ್ ಸುಪರಿಡೆಂಟ್ ಡಾ. ಅಂಜನ್ ಕುಮಾರ್, ಅಡ್ಮಿನಿಸ್ಟೇಷನ್ ಮೆಡಿಕಲ್ ಆಫೀಸರ್ ಡಾ.ರೋಹನ್ ರೋನಿಸ್ ಮೊದಲಾದವರು ಉಪಸ್ಥಿತರಿದ್ದರು.
ಆಡಳಿತ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರೋಶನ್ ಕಾರ್ಯಕ್ರಮ ನಿರೂಪಿಸಿದರು. ಡಾ.ಹ್ಯಾನಿಯಲ್ ಮತ್ತು ಡಾ.ಮಮತಾ ಕಾರ್ಯಕ್ರಮ ನಿರೂಪಿಸಿದರು.