ಪೊಲೀಸರ ಅನುಮತಿ ಪಡೆಯದೆ ‘ಬಜ್ಪೆ ಚಲೋ’ ಪ್ರತಿಭಟನೆ ಆರೋಪ: ಆಯೋಜಕರು, ಭಾಷಣಕಾರರ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಬೇಕೆಂದು ಒತ್ತಾಯಿಸಿ ರವಿವಾರ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸದಸ್ಯರು ಬಜ್ಪೆಯ ಶಾರದಾ ಮಂಟಪದ ಬಳಿ ‘ಬಜ್ಪೆ ಚಲೋ’ ಪ್ರತಿಭಟನಾ ಕಾರ್ಯಕ್ರಮವನ್ನು ಪೊಲೀಸರ ಅನುಮತಿ ಪಡೆಯದೆ ನಡೆಸಿದಕ್ಕಾಗಿ ಕಾರ್ಯಕ್ರಮದ ಆಯೋಜಕರು ಮತ್ತು ಭಾಷಣಕಾರರ ವಿರುದ್ಧ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಬಜ್ಪೆ ಚಲೋ’ ಪ್ರತಿಭಟನಾ ಕಾರ್ಯಕ್ರಮವನ್ನು ಮೇ 25ರಂದು ಮಧ್ಯಾಹ್ನ 3:00 ರಿಂದ ಸಂಜೆ 5:00 ರವರೆಗೆ ನಡೆಸಲಾಗಿದ್ದು, ಸುಮಾರು 3 ಸಾವಿರ ಮಂದಿ ಪ್ರತಿಭಟನಾಕಾರರು ಬಜ್ಪೆ ಬಸ್ ನಿಲ್ದಾಣ ಮತ್ತು ಸುತ್ತಮುತ್ತ ಕಾನೂನುಬಾಹಿರವಾಗಿ ಜಮಾಯಿಸಿ, ಉದ್ದೇಶಪೂರ್ವಕವಾಗಿ ಬಸ್ ನಿಲ್ದಾಣ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ಹಾಗೂ ರಾಜ್ಯ ಹೆದ್ದಾರಿ ಸಂಖ್ಯೆ 67 ರ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡು, ವಾಹನ ಸಂಚಾರ ಮತ್ತು ಸಾರ್ವಜನಿಕರ ಪ್ರವೇಶಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರತಿಭಟನೆಯಲ್ಲಿ, ಭಾಷಣಕಾರರಲ್ಲಿ ಒಬ್ಬರು ಸುಹಾಸ್ ಶೆಟ್ಟಿ ಪ್ರಕರಣವನ್ನು ಉಲ್ಲೇಖಿಸಿ ಕೋಮು ಸೌಹಾರ್ದತೆಯನ್ನು ಕೆರಳಿಸುವ ಮತ್ತು ಸಾರ್ವಜನಿಕ ಶಾಂತಿ ಕದಡುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 189(2), 191(2), 285, 192, 351(2), 351(3), 190 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ, 1963ರ ಸೆಕ್ಷನ್ 107, 109, ಅನ್ವಯ ಕಾರ್ಯಕ್ರಮದ ಆಯೋಜಕರು ಮತ್ತು ಭಾಷಣಕಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟನೆ ತಿಳಿಸಿದೆ.