ಕದ್ರಿ ಜೋಗಿ ಮಠದ ಕಚೇರಿಯಿಂದ ನಗ ನಗದು ಕಳವು: ಪ್ರಕರಣ ದಾಖಲು
ಮಂಗಳೂರು, ಜ.28: ಕದ್ರಿ ಜೋಗಿ ಮಠ ಆವರಣದಲ್ಲಿರುವ ಜೋಗಿ ಮಠ ಜೀರ್ಣೋದ್ದಾರ ಮತ್ತು ಕಾರ್ಯ ನಿರ್ವಹಣಾ ಸಮಿತಿ ಕಚೇರಿಯ ಬಾಗಿಲ ಬೀಗ ಮುರಿದು ಕವಾಟಿನಲ್ಲಿದ್ದ ಧೂಮಾವತಿ ದೈವ, ಗಣಪತಿ ದೇವರ ಚಿನ್ನಾಭರಣ ಮತ್ತು ನಗದು ಕಳವಾದ ಘಟನೆ ವರದಿಯಾಗಿದೆ.
ಕವಾಟಿನಲ್ಲಿದ್ದ ಧೂಮಾವತಿ ದೈವದ ಆಭರಣಗಳಿದ್ದ ಬ್ಯಾಗ್ ನಲ್ಲಿದ್ದ 8 ಬೆಳ್ಳಿಯ ಗುಬ್ಬೆಗಳ ಪೈಕಿ 07 ಗುಬ್ಬೆಗಳನ್ನು, ಎರಡು ಬೆಳ್ಳಿಯ ಅರ್ಧ ಚಂದ್ರಾಕೃತಿಯ ಆಭರಣಗಳ ಪೈಕಿ ಒಂದು ಬೆಳ್ಳಿಯ ಅರ್ಧ ಚಂದ್ರಾಕೃತಿಯ ಆಭರಣ, ಎರಡು ಬೆಳ್ಳಿಯ ದೊಡ್ಡ ಹೂವುಗಳ ಪೈಕಿ ಒಂದು ದೊಡ್ಡ ಬೆಳ್ಳಿಯ ಹೂವು, ಎರಡು ಬೆಳ್ಳಿಯ ಸಣ್ಣ ಹೂವುಗಳ ಪೈಕಿ ಒಂದು ಬೆಳ್ಳಿಯ ಸಣ್ಣ ಹೂವು, ಒಂದು ಗಂಧದ ಗಿಂಡಿ ಬಟ್ಟಲು ಕಳವಾಗಿದೆ.
ಗಣಪತಿಯ ಎರಡು ಬೆಳ್ಳಿಯ ಸೊಂಡಿಲುಗಳ ಕಟ್ಟಗಳ ಪೈಕಿ ಒಂದು ಸೊಂಡಿಲು ಕಟ್ಟ, ನಾಲ್ಕು ಬೆಳ್ಳಿಯ ಕೈಕಡಗ ಗಳ ಪೈಕಿ ಮೂರು ಕೈಕಡಗಗಳು, ಬೆಳ್ಳಿಯ ಕಿವಿಯ ಒಂದು ಕುಂಡಲಗ, ಬೆಳ್ಳಿಯ ಎರಡು ಕಾಲ್ಗಡಗಳನ್ನು ಕಳ್ಳರು ಕಳವು ಮಾಡಿರುವುದು ಜ.27ರಂದು ಬೆಳಕಿಗೆ ಬಂದಿದೆ.
ಸುಮಾರು ರೂ. 90,000 ರೂ. ಮೌಲ್ಯದ 511 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಹಾಗೂ ನಗದು ರೂ. 40,000ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಮೌಲ್ಯ ರೂ.1,30,000 ಆಗಿರುತ್ತದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಕದ್ರಿ ಜೋಗಿ ಮಠದ ಜೀರ್ಣೋದ್ದಾರ ಮತ್ತು ಕಾರ್ಯನಿರ್ವಹಣಾ ಸಮಿತಿ ಅಧ್ಯಕ್ಷ ಹರಿನಾಥ ಎಂ ಅವರು ನೀಡಿರುವ ದೂರಿನಂತೆ ಮಂಗಳೂರು ಪೂರ್ವ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.