×
Ad

ಎನ್‌ಐಟಿಕೆ ಅಕ್ರಮ ಟೋಲ್‌ಗೇಟ್ ವಿರುದ್ಧ ಪ್ರತಿಭಟಿಸಿದ್ದ 101 ಹೋರಾಟಗಾರರ ಮೇಲೆ ಚಾರ್ಜ್ ಶೀಟ್

Update: 2023-12-11 23:43 IST

ಫೈಲ್‌ ಫೋಟೊ

ಸುರತ್ಕಲ್, ಡಿ.11: ರಾಷ್ಟ್ರೀಯ ಹೆದ್ದಾರಿ 66ರ ಎನ್‌ಐಟಿಕೆಯಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಟೋಲ್‌ಗೇಟ್ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದ ಸುಮಾರು 101 ಮಂದಿ ಹೋರಾಟಗಾರರ ಮೇಲೆ ಸುರತ್ಕಲ್ ಪೊಲೀಸರು ಜಾರ್ಜ್ ಶೀಟ್ ಸಲ್ಲಿಸಿದ್ದು, ಸೋಮವಾರ ಹಲವು ಹೋರಾಟಗಾರರ ಮೊಬೈಲ್‌ಗಳಿಗೆ ಮೆಸೇಜ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

2022ರ ನವೆಂಬರ್‌ನಲ್ಲಿ ಟೋಲ್‌ಗೇಟ್ ತೆರವು ಹೋರಾಟ ಸಮಿತಿ ಟೋಲ್ ಗೇಟ್‌ನ್ನು ತೆರವುಗೊಳಿಸುವ ಕುರಿತು ನೇರ ಕಾರ್ಯಾಚರಣೆಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಾವಿರಾರು ಹೋರಾಟಗಾರರು ಪೊಲೀಸರ ಸರ್ಪಗಾವಲನ್ನು ಹಿಮ್ಮೆಟ್ಟಿಸಿ ಟೋಲ್ ಬೂತ್‌ಗೆ ಮುತ್ತಿಗೆ ಹಾಕಿದ್ದರು. ಈ ವೇಳೆ ಸುಮಾರು 250ಕ್ಕೂ ಅಧಿಕ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದರು.

ಘಟನೆಗೆ ಸಂಬಂಧಿಸಿ ಟೋಲ್‌ಗೇಟ್ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಸೇರಿದಂತೆ 101 ಮಂದಿ ಹೋರಾಟಗಾರರ ಮೇಲೆ ಭಾರತೀಯ ದಂಡ ಸಂಹಿತೆ 143, 147, 341, 283 ಆರ್‌ಡಬ್ಲ್ಯೂ ಹಾಗೂ 149 ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಈ ಸಂಬಂಧ 2023ರ ಅಕ್ಟೋಬರ್ ತಿಂಗಳಲ್ಲಿ ಸುರತ್ಕಲ್ ಪೊಲೀಸರು ಮಂಗಳೂರು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಪ್ರಕರಣದಲ್ಲಿ ಸುಮಾರು 250ಕ್ಕೂ ಹೆಚ್ಚಿನವರು ಹೋರಾಟದಲ್ಲಿ ಭಾಗಿಗಳಾಗಿದ್ದರು. ಈ ಪೈಕಿ ಘಟನಾವಳಿಯ ವೀಡಿಯೊ ಸಾಕ್ಷ್ಯದ ಆಧಾರದಲ್ಲಿ 101 ಮಂದಿಯ ಮೇಲೆ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಪೊಲೀಸ್ ಮೂಲ ಮಾಹಿತಿ ನೀಡಿದೆ.

ಈ ಬಗ್ಗೆ ‘ವಾರ್ತಾಭಾರತಿ’ ಜೊತೆ ಮಾತನಾಡಿರುವ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮತ್ತು ಪ್ರಕರಣದ ಎ2 ಆರೋಪಿಯಾಗಿರುವ ಮುನೀರ್ ಕಾಟಿಪಳ್ಳ, ಅಪರಿಚಿತರ ಗುಂಪು ಎಂದು ಪ್ರಕರಣ ದಾಖಲಿಸಲಾಗಿತ್ತು. ಅಲ್ಲಿ ಯಾವುದೇ ಹಿಂಸಾಚಾರವಾಗಿಲ್ಲ. ಪ್ರಾಣ ಹಾನಿ ಸಂಭವಿಸಿಲ್ಲ. ಇದು ಚಾರ್ಜ್ ಶೀಟ್ ದಾಖಲಿಸುವ ಪ್ರಕರಣವೇ ಅಲ್ಲ. ಹಾಕಲೇಬೇಕೆಂದಿದ್ದರೆ, 10-15 ಮಂದಿ ಮುಖಂಡರ ಮೇಲೆ ದಾಖಲಿಸಬಹುದಿತ್ತು. ಆದರೆ, 101 ಮಂದಿ ಹೋರಾಟಗಾರ ಮೇಲೆ ಆರೋಪ ಪಟ್ಟಿ ಸಲ್ಲಿಸಿರುವುದು ಆಶ್ಚರ್ಯ ಮೂಡಿಸಿದೆ ಎಂದು ತಿಳಿಸಿದ್ದಾರೆ.

"ಉಡುಪಿ-ದ.ಕ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ 8-10 ಟೋಲ್ ಗೇಟ್‌ಗಳು ಆರಂಭಿಸುವ ಹುನ್ನಾರಗಳು ನಡೆಯುತ್ತಿವೆ. ಅದರ ಭಾಗವಾಗಿ ಮುಂದಿನ ದಿನಗಳಲ್ಲಿ ಹೋರಾಟಗಳಿಗೆ ಯಾರೂ ಮುಂದಾಗಬಾರದು ಮತ್ತು ಹೋರಾಟಗಳು ವಿಸ್ತರಿಸಬಾರದು ಎಂಬ ದೃಷ್ಟಿಯಿಂದ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಜಿಲ್ಲೆಯ ಸಂಸದರು ಮತ್ತು ಶಾಸಕರ ಒತ್ತಡಕ್ಕೆ ಮಣಿದು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದಿಂದ ವಿಚಲಿರತಾಗುವ ಪ್ರಶ್ನೆಯೇ ಇಲ್ಲ. ದ.ಕ. ಉಡುಪಿಗೆ ಸಂಬಂಧಿತ ಟೋಲ್ ಗೇಟ್‌ಗಳ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ. ನಾವು ಹಿಂದೆ ಸರಿಯುವುದಿಲ್ಲ. ಇದು ಸುರತ್ಕಲ್ ಪೊಲೀಸರ ಜನವಿರೋಧಿ ನೀತಿ ಮತ್ತು ಜಿಲ್ಲೆಯ ಬಿಜೆಪಿ ಶಾಸಕರು, ಸಂಸದರ ಮೇಲಿನ ನಿಷ್ಠೆಯನ್ನು ತೋರ್ಪಡಿಸುತ್ತಿದೆ".

- ಮುನೀರ್ ಕಾಟಿಪಳ್ಳ

ಸಂಚಾಲಕರು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ

"ದ.ಕ. ಜಿಲ್ಲೆಯ ಪೊಲೀಸರು ಬಿಜೆಪಿ ಶಾಸಕರು, ಸಂಸದರ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯ ಮಟ್ಟದಲ್ಲಿ ಇದು ಐತಿಹಾಸಿಕ ಹೋರಾಟವಾಗಿ ಗುರುತಿಸಿಕೊಂಡಿದೆ. ಕಾಂಗ್ರೆಸ್ ಸರಕಾರವಿದ್ದರೂ ಪೊಲೀಸರು ಆರೋಪ ಸಲ್ಲಿಸಿರುವುದ ಪೊಲೀಸರ ಬಿಜೆಪಿ ಅಜಡೆಂಡಾ ಜಾರಿಗೆ ತರಲು ಮುಂದಾಗಿದ್ದಾರೆ ಎಂಬುವುದಕ್ಕೆ ಕೈ ಗನ್ನಡಿ. ಹೋರಾಟದಲ್ಲಿ ಕಾಂಗ್ರೆಸ್‌ನ ಹಲವು ಮುಖಂಡರು, ಸಚಿವರೂ ಭಾಗವಹಿಸಿದ್ದಾರೆ. ಹೀಗಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಆಡಳಿತ ನಡೆಸುತ್ತಿದೆಯೇ ಎಂದು ಅನುಮಾನ ಕಾಡುತ್ತಿದೆ".

-ಬಿ.ಕೆ.ಇಮ್ತಿಯಾಝ್,

ಹೋರಾಟ ಸಮಿತಿ ಸಹ ಸಂಚಾಲಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News