×
Ad

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ: ಉಪ್ಪಿನಂಗಡಿ ಇಳಂತಿಲದ ಯುವತಿ ಮೃತ್ಯು

Update: 2025-06-05 12:01 IST

ಉಪ್ಪಿನಂಗಡಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಮೊದಲ ಬಾರಿ ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಉಪ್ಪಿನಂಗಡಿಯ ಇಳಂತಿಲ ಮೂಲದ ಯುವತಿಯೊಬ್ಬಳು ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಇಳಂತಿಲ ಅಂಡೆತ್ತಡ್ಕ ಮೂಲದ ಕರುಣಾಕರ ಶೆಟ್ಟಿ ಮತ್ತು ಕಾರ್ಕಳ ಹೆಬ್ರಿಯ ಪೂಜಾ ಶೆಟ್ಟಿಯವರ ಪುತ್ರಿ ಚಿನ್ಮಯಿ ಶೆಟ್ಟಿ(20) ಮೃತಪಟ್ಟವರು. ಇವರು ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದರು.

ಆರ್.ಸಿ.ಬಿ. ಐಪಿಎಲ್ ಚಾಂಪಿಯನ್ ಆದ ಸಂಭ್ರಮಾಚರಣೆ ವೀಕ್ಷಿಸಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದ ಚಿನ್ಮಯಿ ಶೆಟ್ಟಿ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಕನಕಪುರ ರಸ್ತೆಯ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದ ಚಿನ್ಮಯಿ ಶೆಟ್ಟಿ, ಉತ್ತಮ ಯಕ್ಷಗಾನ ಕಲಾವಿದೆಯಾಗಿದ್ದು, ಬೆಂಗಳೂರಿನ ಯಕ್ಷತರಂಗ ತಂಡದ ವಿದ್ಯಾರ್ಥಿನಿಯಾಗಿದ್ದರು. ಚಿನ್ಮಯಿ ಉತ್ತಮ ಬಾಸ್ಕೆಟ್ ಬಾಲ್ ಕ್ರೀಡಾಪಟು ಕೂಡಾ ಆಗಿದ್ದರು.

ಚಿನ್ಮಯಿ ಶೆಟ್ಟಿಯವರ ತಂದೆ ಕರುಣಾಕರ ಶೆಟ್ಟಿಯ ಮೂಲತಃ ಸೋಮವಾರಪೇಟೆ ನಿವಾಸಿಯಾಗಿದ್ದು ಕೆಲವರ್ಷಗಳ ಹಿಂದೆ ಇಳಂತಿಲದಲ್ಲಿ ಜಾಗ ಖರೀದಿಸಿ ಮನೆ ಮಾಡಿದ್ದರು. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಅವರು ಕುಟುಂಬ ಸಮೇತ ತಿಪ್ಪಸಂದ್ರದಲ್ಲಿ ವಾಸವಿದ್ದಾರೆ. ಅಂಡೆತ್ತಡ್ಕದಲ್ಲಿ ಅವರ ತಾಯಿ ಮತ್ತು ಮಗಳ ಮಗ ವಾಸ್ತವ್ಯವಿದ್ದಾರೆ. ವಿಷಯ ತಿಳಿದು ಅವರು ಬೆಂಗಳೂರಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಿಗದಿಯಾಗಿತ್ತು. ತಂಡಕ್ಕೆ ಶುಭಾಶಯ ಕೋರಲು, ಸಂಭ್ರಮ ಆಚರಿಸಲು ಕ್ರೀಡಾಂಗಣಕ್ಕೆ ಲಕ್ಷಾಂತರ ಬಂದಿದ್ದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 47 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News