×
Ad

ಡಿ. 21ರಂದು ಪಿಲಿಕುಳದಲ್ಲಿ ಹುಲಿ ಮರಿಗಳ ದತ್ತು ಸ್ವೀಕಾರ

Update: 2025-12-20 19:53 IST

ಮಂಗಳೂರು, ಡಿ.20: ಕರಾವಳಿ ಉತ್ಸವದ ಅಂಗವಾಗಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಡಿ. 21ರಂದು ಬೆಳಗ್ಗೆ 11 ಗಂಟೆಗೆ ಎರಡು ಹುಲಿ ಮರಿಗಳನ್ನು ಸಾರ್ವಜನಿಕ ವೀಕ್ಷಣೆಗೆ ಬಿಡುಗಡೆ ಮಾಡುವ ಜತೆಗೆ ಮರಿಗಳ ದತ್ತು ಸ್ವೀಕಾರ ಪ್ರಕ್ರಿಯೆಯೂ ನಡೆಯಲಿದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ನಗರದ ಕಾರ್ಡಿಯೋಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್ ಇಂಡಿಯಾ ಸಂಸ್ಥೆಯು ಒಂದು ವರ್ಷದ ಅವಧಿಗೆ ಪಿಲಿಕುಳದಲ್ಲಿ ರಾಣಿ ಎಂಬ ಹೆಣ್ಣುಹುಲಿಗೆ ಜನಿಸಿದ ಎರಡು ಮರಿ(ಒಂದು ಹೆಣ್ಣು ಮತ್ತು ಒಂದು ಗಂಡು)ಗಳನ್ನು ದತ್ತು ಪಡೆಯಲು ನಿರ್ಧರಿಸಿದ್ದಾರೆ ಎಂದರು.

ವಾರ್ಷಿಕ ಎರಡು ಮರಿಗಳಿಗೆ ಎಂಟು ಲಕ್ಷ ರೂ.ಗಳಿಗೆ ಸಂಸ್ಥೆ ದತ್ತು ಸ್ವೀಕರಿಸಲಿದ್ದು, ಮರಿಗಳಿಗೆ ನಾಮಕರಣದ ಅವಕಾಶವನ್ನು ಪಡೆದಿದ್ದಾರೆ. ಈಗಾಗಲೇ ಅವರು ಮರಿಗಳಿಗೆ ಟೆನಿಸನ್ ಹಾಗೂ ಒಲಿವರ್ ಎಂಬ ಹೆಸರನ್ನು ಸೂಚಿಸಿದ್ದಾರೆ ಎಂದು ಡಾ. ಅರುಣ್ ಕುಮಾರ್ ತಿಳಿಸಿದರು.

ಒಂದು ವರ್ಷ ಪ್ರಾಯದ ಹುಲಿ ಮರಿಗಳ ಜನ್ಮ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಗಿದೆ. ಒಂದು ವರ್ಷ ಕಾಲ ಅವುಗಳನ್ನು ಮೃಗಾಲಯದ ಪ್ರತ್ಯೇಕ ಗೂಡಿನಲ್ಲಿ ಸಾಕಲಾಗಿದೆ. ನಾಳೆಯಿಂದ ಸಾರ್ವಜನಿಕ ವೀಕ್ಷಣೆಗೆ ಈ ಎರಡೂ ಮರಿಗಳು ಲಭ್ಯವಾಗಲಿವೆ ಎಂದರು.

ಡಿ. 24ರಿಂದ 30ರವರೆಗೆ ಗಾಂಧಿ ಶಿಲ್ಪ ಬಜಾರ್‌ನಡಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಘ ನಿಯಮಿತ ವತಿಯಿಂದ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದೆ. ವಿವಿಧ ಕರಕುಶಲ ಹಾಗೂ ಇತರ ವೈವಿಧ್ಯಮಯ ವ್ಯಾಪಾರ ಸೇರಿದಂತೆ 70 ಮಳಿಗೆಗಳು ಈಗಾಗಲೇ ನೋಂದಣಿಯಾಗಿವೆ. ಪಿಲಿಕುಳಕ್ಕೆ ಆಗಮಿಸುವ ಮಕ್ಕಳ ಮನರಂಜನೆಗಾಗಿ ವನ್ಯಜೀವಿಗಳ ಕುರಿತಾದ ಟ್ರೆಶರ್ ಹಂಟ್ ಮೂಲಕ ಪ್ರಾಣಿಗಳ ಗುರುತು ಪತ್ತೆ ಸ್ಪರ್ಧೆ ಡಿ. 25ರಂದು ನಡೆಯಲಿದೆ. ಡಿ. 27ರಂದು ಪಕ್ಷಿ ವೀಕ್ಷಣಾ ಪ್ರವಾಸ, ಡಿ. 28ರಂದು ಉರಗಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಸಂಸ್ಕೃತಿ ಗ್ರಾಮದಲ್ಲಿ ಸಂಜೆ 6 ಗಂಟೆಗೆ ಯಕ್ಷಗಾನ ಬೊಂಬೆಯಾಟ ಆಯೋಜಿಸಲಾ ಗಿದೆ. ಡಿ. 29ರಂದು ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನದಲ್ಲಿ ಮರಂಜನೆ, ಡಿ. 30ರಂದು ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಡಿ.31ರಂದು ತಾರಾಲಯದಲ್ಲಿ ನಕ್ಷತ್ರ ಪೂಂಜ ಮತ್ತು ಗ್ರಹಗಳ ಪರಿಚಯ ಪ್ರದರ್ಶನ ನಡೆಯಲಿದೆ. ಜ. 1ರಂದು ವಾಟರ್ ರಾಕೆಟ್ ಪ್ರಾತ್ಯಕ್ಷಿಕೆ, ಜ. 2ರಂದು ಡ್ರೋನ್ ಶೋ ನಡೆಯಲಿದೆ ಎಂದು ಅವರು ವಿವರ ನೀಡಿದರು.

ರೈತ ಕುಡ್ಲ ಪ್ರತಿಷ್ಠಾನ ಆಶ್ರಯದಲ್ಲಿ ಡಿ.24ರಿಂದ ಡಿ.28ರವರೆಗೆ ಪಿಲಿಕುಳ ಪರ್ಬ ಕಾರ್ಯಕ್ರಮ ಅರ್ಬನ್ ಹಾತ್‌ನಲ್ಲಿ ನಡೆಯಲಿದೆ. ಪ್ರವೇಶ ಉಚಿತವಾಗಿದ್ದು, ಬೆಳಗ್ಗೆ 10ರಿಂದ ರಾತ್ರಿ 10 ಗಂಟೆಯವರೆಗೆ ಪ್ರದರ್ಶನ ತೆರೆದಿರುತ್ತದೆ. ಕಬ್ಬು ಅರೆಯುವ ಆಲೆಮನೆ, ಮತ್ಸ್ಯ ಪ್ರದರ್ಶನ, ವಿವಿಧ ರಾಜ್ಯಗಳ ಕುಶಲಕರ್ಮಿಗಳ ಮಳಿಗೆ, ಚಿತ್ರಕಲಾ ಪ್ರದರ್ಶನವಿದ್ದು, ಡಿ. 27ರಂದು ಬೆಳಗ್ಗೆ 10.30ಕ್ಕೆ ಸಾವಯವ ಕೃಷಿಕ ಗ್ರಾಹಕ ಬಳಗಿಂದ ಪೌಷ್ಠಿಕ ಆಹಾರ ತಯಾರಿಕೆ ಕಾರ್ಯಾಗಾರ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಎಲ್‌ಕೆಜಿಯಿಂದ 10ನೆ ತರಗತಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಡಿ. 28ರಂದು ಬೆಳಗ್ಗೆ 10ರಿಂದ ಮಹಿಳೆಯರಿಗೆ ಹಗ್ಗ ಜಗ್ಗಾಟ, ಮಕ್ಕಳಿಗೆ ಮನರಂಜನಾ ಕಾರ್ಯ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಡಳಿತಾಧಿಕಾರಿ ಅಶೋಕ್, ಪ್ರಾದೇಶಿಕ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಕೆ.ವಿ. ರಾವ್, ಕರಕುಶಲ ಸೇವಾ ಕೇಂದ್ರದ ಸಹಾಕ ನಿರ್ದೇಶಕಿ ರಾಜೇಶ್ವರಿ ಕೆ.ಎಂ., ರಾಮಕೃಷ್ಣನ್ ಮರಾಠೆ, ಸುಚಿತ್ರ, ಶಿವರಾಂ, ಭರತ್ ಮೊದಲಾದವರು ಉಪಸ್ಥಿತರಿದ್ದರು.

"ಕರಾವಳಿ ಉತ್ಸವದ ಅಂಗವಾಗಿ ಮಾ. 20ರಿಂದ ಜ. 4ರವರೆಗೆ ಪಿಲಿಕುಳಕ್ಕೆ ಸ್ಟೇಟ್‌ಬ್ಯಾಂಕ್‌ನಿಂದ ಕೆಎಸ್‌ಆರ್‌ಟಿಸಿ ಬಸ್ಸು ಸೌಲಭ್ಯವಿರಲಿದೆ. ಎರಡು ಬಸ್‌ಗಳು ದಿನಕ್ಕೆ ತಲಾ 12ರಂತೆ 24 ಟ್ರಿಪ್‌ಗಳನ್ನು ಸಾರ್ವಜನಿಕರಿಗೆ ಒದಗಿಸಲಿದೆ. ಈ ಅವಧಿಯಲ್ಲಿ ಸಾರ್ವಜನಿಕರಿಗೆ ಪಿಲಿಕುಳದ ವಿವಿಧ ವಿಭಾಗಗಲಿಗೆ ಭೇಟಿ ನೀಡಲು ಕಾಂಬೋ ಪ್ಯಾಕ್ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಈ ಶುಲ್ಕ ಸಾಮಾನ್ಯ 250 ರೂ.ಗಳ ಬದಲು 125 ರೂ.ಗಳಾಗಿರುತ್ತವೆ".

-ಡಾ. ಅರುಣ್ ಕುಮಾರ್ ಶೆಟ್ಟಿ, ಆಯುಕ್ತರು, ಪಿಲಿಕುಳ ಅಭಿವೃದ್ದಿ ಪ್ರಾಧಿಕಾರ


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News